ಉಡುಪಿ: ಜಿಲ್ಲೆಯಲ್ಲಿಂದು ನಾಮಕಾವಸ್ಥೆಯ ಟಿಪ್ಪು ಜಯಂತಿ ಆಚರಣೆ ನಡೆಯಿತು. ಮಣಿಪಾಲದ ರಜತಾದ್ರಿ ಜಿಲ್ಲಾಡಳಿತ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಉಸ್ತುವಾರಿ ಸಚಿವೆ ಜಯಮಾಲ, ಸಂಸದೆ ಶೋಭಾ ಕರಂದ್ಲಾಜೆ, ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ, ಎಂಎಲ್‌ಎ ರಘುಪತಿ ಭಟ್, ಎಂಎಲ್ ಸಿ ಪ್ರತಾಪ್ ಚಂದ್ರ ಶೆಟ್ಟಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷದ ಯಾವುದೇ ನಾಯಕರು, ಮುಖಂಡರು ಭಾಗವಹಿಸದೆ ಟಿಪ್ಪು ಜಯಂತಿ ಇಂದು ಅಕ್ಷರಶಃ ಕಾಟಾಚರಕ್ಕೆ ನಡೆದಂತಿತ್ತು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಸೇರಿದಂತೆ ಜಿಲ್ಲಾಮಟ್ಟದ ಕೆಲವೇ ಅಧಿಕಾರಿಗಳು ವೇದಿಕೆಯಲ್ಲಿ ಕಂಡುಬಂದರು.
ಇನ್ನು ಕಾರ್ಯಕ್ರಮ ನಡೆಯುತ್ತಿರುವಾಗಲೇ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಜಿಲ್ಲಾಡಳಿತ ಸಂಕೀರ್ಣಕ್ಕೆ ನುಗ್ಗಲು ಯತ್ನಿಸಿದಾಗ 500 ಮೀಟರ್ ದೂರದಲ್ಲೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಇನ್ನು ಕೆಲ ಯುವಕರು ಬೈಕಿನಲ್ಲಿ ಟಿಪ್ಪು ಭಾವಚಿತ್ರವುಳ್ಳ ಫ್ಲಾಗ್ ಹಾಕಿ ಟಿಪ್ಪು ಜಯಂತಿ ನಡೆಯವ ಸ್ಥಳಕ್ಕೆ ತೆರಳುವಾಗ್ಲೇ ಪೊಲೀಸರು ಫ್ಲಾಗ್ ಕಿತ್ತು ಯುವಕರನ್ನು ಸ್ಥಳದಿಂದ ಕಳುಹಿಸಿದ ಘಟನೆಯೂ ನಡೆಯಿತು.