ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಬ್ರಹ್ಮ ಡಾ. ಮೋಹನ್ ಆಳ್ವ, ಇತಿಹಾಸ ತಜ್ಞ ಡಾ. ತುಕರಾಮ ಪೂಜಾರಿ ಬಂಟ್ವಾಳ, ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್
ಬೆಂಗಳೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ಬೆಂಗಳೂರು ವತಿಯಿಂದ ಕೊಡಮಾಡುವ 2024 ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಘೋಷಣೆಯಾಗಿದ್ದು,ಮೂಡಬಿದಿರೆಯ ವಿದ್ಯಾ ನಗರಿಯ ಹರಿಕಾರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೂವಾರಿ ಡಾ ಮೋಹನ ಆಳ್ವರು ಪ್ರತಿಷ್ಠಿತ ಜೀವಮಾನ ಸಾಧಕ -2024 ಪ್ರಶಸ್ತಿಗೆ ಆಯ್ಕೆಯಾದರೆ, ಅಬ್ಬಕ್ಕನ ಕಲಾ ಗ್ಯಾಲರಿಯ ಸ್ಥಾಪಕರು, ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಇತಿಹಾಸ, ಜಾನಪದ ತಜ್ಞರು ಹಾಗೂ ಹಲವು ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಂಟ್ವಾಳದ ಡಾ. ತುಕರಾಮ್ ಪೂಜಾರಿ ಯವರು ಪ್ರತಿಷ್ಠಿತ ಹೆಚ್ ಎನ್ ಪ್ರಶಸ್ತಿ- 2024 ಕ್ಕೆ ಆಯ್ಕೆಯಾಗಿದ್ದಾರೆ.
ಹಾಗೆಯೇ ಮಹಿಳಾ ಕ್ಷೇತ್ರದ ಸಾಧನೆಗಾಗಿ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು ಪ್ರವೃತ್ತಿಯಲ್ಲಿ ತರಬೇತುದಾರಳು, ಸಂಘಟಕರು ಹಾಗೂ ಬರಹಗಾರ್ತಿಯಾಗಿರುವ ಬಹುಮುಖ ಪ್ರತಿಭೆ ಸುಳ್ಯದ ಡಾ.
ಅನುರಾಧಾ ಕುರುಂಜಿಯವರು ಪ್ರಪ್ರಥಮ ಬಾರಿಗೆ ಕೊಡಮಾಡುವ ಪ್ರತಿಷ್ಠಿತ ಚೈತನ್ಯ ಶ್ರೀ- 2024 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಂದು ಪರಿಷತ್ತ್ ನ ಸಂಸ್ಥಾಪಕ ಅಧ್ಯಕ್ಷರಾದ ಹುಲಿಕಲ್ ನಟರಾಜ್ ಹಾಗೂ ದ. ಕ ಜಿಲ್ಲಾಧ್ಯಕ್ಷರಾದ ಕಿದು ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಇದೇ ಡಿ. 28 ಮತ್ತು 29 ರಂದು ನಡೆಯಲಿರುವ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಲಿರುವ,, ರಂಗಕರ್ಮಿ, ಚಲನಾ ಚಿತ್ರ ನಟಿ ಉಮಾಶ್ರೀ ಸರ್ವಾಧ್ಯಕ್ಷರಾಗಿರುವ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ, ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿದೆ.