Recent Posts

Monday, January 20, 2025
ಉಡುಪಿಸುದ್ದಿ

ಮಾನಸಿಕ ಅಸ್ವಸ್ಥರಿಗೆ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ ತಹಶಿಲ್ದಾರ್; ಜನರಿಂದ ವ್ಯಾಪಕ ಮೆಚ್ಚುಗೆ-ಕಹಳೆ ನ್ಯೂಸ್

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳ್ ಬಡಾ ಗ್ರಾಮದ ಕಿರಣ ಕುಮಾರಿ (52 ವರ್ಷ) ಪ್ರಮೋದ (69ವರ್ಷ) ಈ ಇಬ್ಬರು ಮಹಿಳೆಯರಿಗೆ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ.

ಇದುವರೆಗೂ ಇವರಿಬ್ಬರಿಗೂ ಆಧಾರ್ ಕಾರ್ಡ್ ಇರಲಿಲ್ಲ. ಅವರು ಮಾನಸಿಕ ಅಸ್ವಸ್ಥರಾಗಿರುವ ಕಾರಣ ಅವರ ಪೋಷಕರಿಗೆ ಆಧಾರ್ ಕೇಂದ್ರಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ. ಆಧಾರ್ ಕಾರ್ಡ್ ಇಲ್ಲದ ಕಾರಣ ಸರಕಾರದ ಯಾವುದೇ ಯೋಜನೆಗಳು, ಪಿಂಚಣಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿರಣಕುಮಾರಿ (52 ವರ್ಷ) ಇವರ ತಾಯಿ 75 ವರ್ಷದ ವೃದ್ಧೆ. ಇವರು ತಹಶಿಲ್ದಾರರ ಕಚೇರಿಗೆ ಬಂದು ಕಣ್ಣೀರು ಹಾಕಿದ್ದರು. “ತಾನು ಅಕಸ್ಮಾತ್ ಸತ್ತರೆ ನನ್ನ ಮಗಳಿಗೆ ಗತಿ ಯಾರು… ಪಿಂಚಣಿ ಆದರೂ ಬರುವಂತಾದರೆ ಅನುಕೂಲವಾಗುತ್ತದೆ. ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ಸೇರಿಸಲೂ ಸಹ ಅಲ್ಲಿ ಆಧಾರ್ ಕಾರ್ಡ್ ಕೇಳುತ್ತಾರೆ. ನನಗೆ ಮಗಳನ್ನು ಆಧಾರ್ ಕೇಂದ್ರಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ…. ನಮಗೆ ಸಹಾಯ ಮಾಡಿ” ಎಂದು ಅಳಲು ತೋಡಿಕೊಂಡಿದ್ದರು.
ಪ್ರಮೋದ 69 ವರ್ಷದ ಮಹಿಳೆ. ಈಕೆಯನ್ನೂ ಆಧಾರ್ ಕೇಂದ್ರಕ್ಕೆ ಕರೆತರಲು ಸಾಧ್ಯವಿರಲಿಲ್ಲ. ಪೋಷಕರು ಬಂದು ತಹಶಿಲ್ದಾರರ ಬಳಿ ಅಳಲು ತೋಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರಿಬ್ಬರ ಮನೆ ಅಕ್ಕಪಕ್ಕದಲ್ಲಿ ಇತ್ತು. ಇವರಿಬ್ಬರ ಗೋಳು ಕಂಡು ತಹಶಿಲ್ದಾರ್ ಪ್ರತಿಭಾ ಆರ್ ತಕ್ಷಣ ಕಾರ್ಯ ಪ್ರವೃತ್ತರಾದರು. ಇಡೀ ಆಧಾರ್ ಕೇಂದ್ರವನ್ನೇ ಅವರ ಮನೆಗೆ ಕೊಂಡೊಯ್ಯುವ ಏರ್ಪಾಟು ಮಾಡಿದರು.
ಕಂಪ್ಯೂಟರ್, ಕೀ ಬೋರ್ಡ್,eye scanner, palm scanner ಇನ್ನಿತರ ಎಲೆಕ್ಟ್ರಾನಿಕ್ ಗೆಜೆಟ್ ಗಳು ಎಲ್ಲವನ್ನೂ ಸಾಗಿಸುವುದು ಕಷ್ಟವಾದರೂ ಎಲ್ಲವನ್ನೂ ನಿಭಾಯಿಸಿಕೊಂಡು ಆಧಾರ್ ಆಪರೇಟರ್ ಸಂಧ್ಯಾ ರವರನ್ನು ಕರೆದುಕೊಂಡು ಕಿರಣಕುಮಾರಿ ಅವರ ಮನೆಗೆ ಸ್ವತಃ ತೆರಳಿದರು.

ಅಲ್ಲಿ ಇಡೀ ಆಧಾರ್ ಕೇಂದ್ರವನ್ನು ಸೆಟಪ್ ಮಾಡಿಕೊಂಡು ಆ ಇಬ್ಬರು ಮಾನಸಿಕ ಅಸ್ವಸ್ಥರ ಆಧಾರ್ ಕಾರ್ಡ್ ಮಾಡಿಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ್ ಎರ್ಮಾಳ್, ಅಜೀಜ್ ಹೆಜಮಾಡಿ ಇದಕ್ಕೆ ನೆರವಾದರು. ಆಧಾರ್ ಕೇಂದ್ರದ ಇಸ್ಮಾಯಿಲ್ ಫಲಿಮಾರು ಅವರು ಮುತುವರ್ಜಿ ವಹಿಸಿ ಈ ಕೆಲಸ ಆಗಲು ಸಹಕರಿಸಿದರು.
ಆಧಾರ್ ಆಪರೇಟರ್ ಸಂಧ್ಯಾ ಸಹಕರಿಸಿದರು.

ಡಾ.ಪ್ರತಿಭಾ ಆರ್ ಹೇಳಿಕೆ

ಮಾನಸಿಕ ಅಸ್ವಸ್ಥರ ಬದುಕು ಮಗುವಿನಂತದ್ದು… ಅವರಿಗೆ ಪ್ರಪಂಚದ ಆಗು ಹೋಗುಗಳ ಅರಿವಿರುವುದಿಲ್ಲ. ಅಂತವರ ಬದುಕನ್ನು ಸಹ್ಯಗೊಳಿಸಬೇಕಾದ ಹೊಣೆ ನಮ್ಮಂತಹ ಅಧಿಕಾರಿಗಳ ಮೇಲಿದೆ. ಮಾನವೀಯ ಸ್ಪರ್ಶದೊಂದಿಗೆ ಕೆಲಸ ಮಾಡಲು ಮುಂದಾದರೆ ಎಲ್ಲವೂ ಸಾಧ್ಯವಾಗುತ್ತದೆ. ಈ ಆಧಾರ್ ಕಾರ್ಡ್ ನಿಂದ ಮುಂದೆ ಅವರುಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ. ಸದ್ಯದಲ್ಲೇ ಅವರುಗಳಿಗೆ ಪಿಂಚಣಿ ದೊರಕಲು ಕ್ರಮವಹಿಸುತ್ತೇನೆ.

ಆ ಮಾನಸಿಕ ಅಸ್ವಸ್ಥರ ಪೋಷಕರು ಮನೆಗೆ ಬಂದು ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದಕ್ಕೆ ಆನಂದ ಬಾಷ್ಪ ಸುರಿಸುತ್ತಾ ಕೃತಜ್ಞತೆ ಸಲ್ಲಿಸಿದರು. “ಇಂತಹ ಮಾನವೀಯ ಅಧಿಕಾರಿಗಳು ಇರುವುದರಿಂದ ನಮ್ಮಂತಹವರ ಬದುಕು ಹಸನಾಗುತ್ತಿದೆ. ಎಲ್ಲಾ ಅಧಿಕಾರಿಗಳು ಇವರ ರೀತಿಯಲ್ಲಿ ಕೆಲಸ ಮಾಡಿದರೆ ಖಂಡಿತ ಈ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತವೆ. ಇವರು ನಮ್ಮ ತಹಶಿಲ್ದಾರ್ ಆಗಿರುವುದು ನಮ್ಮ ಭಾಗ್ಯ” ಎಂದು ಹೇಳಿದರು.