ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು – ಕಹಳೆ ನ್ಯೂಸ್
ತಮಿಳುನಾಡು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಡಿಎಂಕೆ ಸರ್ಕಾರ ಬೆಂಬಲ ನೀಡಿದೆ ಎಂದು ಟೀಕಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಕೊಯಮತ್ತೂರು ಬಾಂಬ್ ಸ್ಫೋಟದಲ್ಲಿ 58 ಜನರ ದುರಂತ ಸಾವಿಗೆ ಕಾರಣವಾದ ಭಯೋತ್ಪಾದಕನನ್ನು ವೈಭವೀಕರಿಸುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಣ್ಣಾಮಲೈ ಮತ್ತು ಇತರ ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.
30 ವರ್ಷಗಳಿಂದ ಜೈಲಿನಲ್ಲಿದ್ದ ನಿಷೇಧಿತ ಅಲ್ ಉಮ್ಮಾ ಸಂಘಟನೆಯ ಮುಖ್ಯಸ್ಥನಾಗಿದ್ದ ಎಸ್.ಎ.ಬಾಷಾಗೆ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಜಾಮೀನು ನೀಡಲಾಗಿತ್ತು. ಆರೋಗ್ಯ ಹದಗೆಟ್ಟ ಕಾರಣ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಆತನ ಅಂತ್ಯಕ್ರಿಯೆಗೆ ಪೊಲೀಸರು ಅನುಮತಿ ನೀಡಿದ್ದಕ್ಕೆ ತಮಿಳುನಾಡು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಬಾಷಾ ಅಂತ್ಯಕ್ರಿಯೆಗೆ ಅನುಮತಿ ನೀಡಿದ ಪೊಲೀಸರ ವಿರುದ್ಧ ಕೊಯಮತ್ತೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಘೋಷಿಸಿದ್ದರು. ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿದ ಕಾರಣ ಅಣ್ಣಾಮಲೈ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.