ದೇವಸ್ಥಾನದ ಹುಂಡಿಗೆ ಬಿದ್ದ ಐಫೋನ್ : ದೇವಸ್ಥಾನ ಆಡಳಿತ ಮಂಡಳಿಯ ಮಾತು ಕೇಳಿ ಶಾಕ್ ಆದ ಭಕ್ತ – ಕಹಳೆ ನ್ಯೂಸ್
ದೇವಸ್ಥಾನಗಳಲ್ಲಿ ಹುಂಡಿಗೆ ಹಾಕಿದ ಹಣ ಮತ್ತೆ ಎತ್ತುವುದಿಲ್ಲ. ಕೆಲವು ದೇವಸ್ಥಾನಗಳಲ್ಲಿ ಈ ಕುರಿತು ಸ್ವಲ್ಪ ಸಡಿಲ ನಿಯಮಗಳಿರಬಹುದು. ಆದರೆ ಇನ್ನೂ ಕೆಲವು ದೇವಸ್ಥಾನ ಈ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್. ಹುಂಡಿಗೆ ಏನೇ ಬಿದ್ದರು ಸರಿಯೇ, ಅದು ದೇವರಿಗೆ ಸಮರ್ಪಣೆ ಎನ್ನುವ ಭಾವನೆ ಎಲ್ಲಾ ಕಡೆಗಳಲ್ಲಿಯೂ ಇದೆ. ಆದರೆ ಇತ್ತೀಚೆಗೆ ಚೆನ್ನೈನ ಒಂದು ದೇವಸ್ಥಾನದಲ್ಲಿ ನಡೆದ ಘಟನೆಯಲ್ಲಿ ಭಕ್ತ ಪೇಚಿಗೆ ಸಿಲುಕುವ ಹಾಗೆ ಆಗಿದೆ.
ಮಗುವನ್ನು ಹೊತ್ತುಕೊಂಡು ದಂಪತಿ ದೇವಸ್ಥಾನದ ಹುಂಡಿಯಲ್ಲಿ ಕಾಣಿಕೆ ಹಾಕುತ್ತಿದ್ದರು. ಅವರ ಗಡಿಬಿಡಿಗೆ ಮಗು ಹುಂಡಿಗೆ ಬೀಳುತ್ತದೆ. ದೇವಸ್ಥಾನದ ಅಧಿಕಾರಿಗಳು ಅವರನ್ನು ಸಂಪರ್ಕಿಸಿದಾಗ, ಮಗುವನ್ನು ಮರಳಿ ನೀಡಲು ನಿರಾಕರಿಸುತ್ತಾರೆ. ಹುಂಡಿಯಲ್ಲಿ ಏನಿದೆಯೋ ಅದು ದೇವರಿಗೆ ಕಾಣಿಕೆಯಾಗಿದೆ. ಇದು 2000 ರ ತಮಿಳು ಚಿತ್ರ – ಪಲಾಯತು ಅಮ್ಮನ್‌ನ ದೃಶ್ಯಗಳು. ಹೌದು, ಇಂಥದ್ದೊಂದು ನಂಬಿಕೆ ಈಗಲೂ ಇದೆ.
ಹುಂಡಿಗೆ ಬಿದ್ದರೆ ಎತ್ತೋ ಮಾತಿಲ್ಲ
ಕಾಣಿಕೆ ಹುಂಡಿಗೆ ಏನೇ ಬೀಳಲಿ, ಹಾಕಲಿ ಅದು ಸಮರ್ಪಣೆ ಎನ್ನುವುದು ಅಲ್ಲಿಗೆ ಫಿಕ್ಸ್. ದೇವರಿಗೆ ಸೇರಿದ್ದು, ಸಂಪೂರ್ಣವಾಗಿ ದೇವರದ್ದು, ಅದನ್ನು ಮತ್ತೆ ತೆಗೆದುಕೊಳ್ಳುವಂತಿಲ್ಲ ಎನ್ನುವ ನಿಯಮ ಈಗಲೂ ಸಾಕಷ್ಟು ದೇವಸ್ಥಾನಗಳಲ್ಲಿದೆ.
ಮೂರು ತಿಂಗಳ ಹಿಂದೆ ತಿರುಪೋರೂರು ಕಂದಸಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಂಬತ್ತೂರಿನ ವಿನಾಯಕಪುರಂನ ಡಿ ದಿನೇಶ್ ಎಂಬ ಭಕ್ತನ ಜೀವನದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಕೆಲವೊಮ್ಮೆ ರೀಲ್ ಲೈಫ್ ರಿಯಲ್ ಲೈಫ್ನಲ್ಲಿ ನಿಜವಾಗುತ್ತವೆ.
ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಐಫೋನ್
ಮಗುವಿನ ಜಾಗದಲ್ಲಿ ಆ ಭಕ್ತನ 1 ಲಕ್ಷ ಮೌಲ್ಯದ ಐಫೋನ್ ಪ್ರೊ ಹುಂಡಿಯಲ್ಲಿ ಬಿದ್ದಿತ್ತು. ದೇವಾಲಯದ ಅಧಿಕಾರಿಗಳದ್ದು ಒಂದೇ ಉತ್ತರ ಏನೆಂದರೆ ಹುಂಡಿಯಲ್ಲಿ ಏನೇನು ಬಿದ್ದರೂ ಅದು ದೇವರಿಗೆ ಅರ್ಪಣೆ ಎನ್ನುವುದು. ಅಂತೂ 1 ಲಕ್ಷಕ್ಕೂ ಅಧಿಕ ಮೌಲ್ಯದ ಐಫೋನ್ ಮರಳಿಸೋದೆ ಇಲ್ಲ ಅಂತ ದೇವಸ್ಥಾನ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ.
ಕೆಲವು ವಿವರಿಸಲಾಗದ ಕಾರಣಗಳಿಗಾಗಿ, ಘಟನೆಯ ನಂತರ ದಿನೇಶ್ ದೇವಸ್ಥಾನದ ಅಧಿಕಾರಿಗಳಿಗೆ ಈ ಕುರಿತು ಹೇಳಲಿಲ್ಲ. ದೇವಸ್ಥಾನದ ಅಧಿಕಾರಿಗಳು 10 ದಿನಗಳ ನಂತರ ಅವರನ್ನು ಸಂಪರ್ಕಿಸಿದರು ಎಂದು ಹೇಳಲಾಗಿದೆ.
ಗುರುವಾರ ಅಧಿಕಾರಿಗಳು ಹುಂಡಿ ತೆರೆದಾಗ, ಐಫೋನ್ ಸಿಕ್ಕರೂ, ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ದೇವಾಲಯದ ನಿಯಮಗಳ ಪ್ರಕಾರ ದೇವರಿಗೆ ಅರ್ಪಿಸಿದ ಯಾವುದೇ ವಸ್ತುವನ್ನು ಕೂಡಾ ಹಿಂತಿರುಗಿಸಲಾಗುವುದಿಲ್ಲ ಎಂದು ದಿನೇಶ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ದೇವಸ್ಥಾನದ ಅಧಿಕಾರಿಗಳು ಭಕ್ತ ತಮ್ಮ ಐಫೋನ್ ಡೇಟಾವನ್ನು ವರ್ಗಾಯಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಕೇವಲ ಫೋನ್ ಮಾತ್ರ ದೇವಾಲಯಕ್ಕೆ ಸೇರಿದ್ದು ಎಂದು ಹೇಳಿದರು.
ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಘಟನೆ ನಡೆದಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ದಿನೇಶ್ ಸ್ವಯಂಪ್ರೇರಣೆಯಿಂದ ಮೊಬೈಲ್ ಹುಂಡಿಗೆ ಹಾಕಿದ್ದರೂ ಕೂಡಾ ಆ ನಂತರ ಮನಸ್ಸು ಬದಲಾಯಿಸಿದರು ಎಂದು ಆ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿದ್ದ ಇತರ ಭಕ್ತರು ಹೇಳಿದ್ದಾರೆ ಎಂದು ದೇವಸ್ಥಾನದ ಅಧಿಕಾರಿ ಹೇಳಿದರು. ಅಂತೂ ಇಂತೂ ಭಕ್ತ ದಿನೇಶ್ ಅವರು ಐಫೋನ್ ಮಾತ್ರ ಈಗ ದೇವಸ್ಥಾನದ ಪಾಲಾಗಿದೆ. ಸದ್ಯ ಅವರಿಗೆ ಅವರ ಮೊಬೈಲ್ ಸಿಮ್ ಕಾರ್ಡ್ ವಾಪಸ್ ಸಿಗಲಿದೆ.