ಕುಂದಾಪುರ : ತ್ರಾಸಿ – ಸಮುದ್ರದಲ್ಲಿ ಜೆಟ್ ಸ್ಕೀ ಪಲ್ಟಿಯಾಗಿ ರೈಡರ್ ನಾಪತ್ತೆ- ಕಹಳೆ ನ್ಯೂಸ್
ಕುಂದಾಪುರ : ಸಮುದ್ರದಲ್ಲಿ ಪ್ರವಾಸಿಗರನ್ನು ಕರೆದೊಯ್ಯತ್ತಿದ್ದ ಜೆಟ್ ಸ್ಕೀ ಬೋಟ್ ಪಲ್ಟಿಯಾದ ಪರಿಣಾಮ ರೈಡರ್ ಸಮುದ್ರ ಪಾಲಾದ ಘಟನೆ ತ್ರಾಸಿ ಕಡಲ ಕಿನಾರೆಯಲ್ಲಿ ಸಂಭವಿಸಿದೆ. ನಾಪತ್ತೆಯಾಗಿರುವವರನ್ನು ಜೆಟ್ ಸ್ಕೀ ರೈಡರ್ ರೋಹಿದಾಸ್ ಅಲಿಯಾಸ್ ರವಿ (45) ಎಂದು ಗುರುತಿಸಲಾಗಿದೆ.
ಇವರ ಜೊತೆ ರೈಡ್ ಗೆ ತೆರಳಿದ್ದ ಬೆಂಗಳೂರಿನ ಪ್ರವಾಸಿಗನನ್ನು ರಕ್ಷಿಸಲಾಗಿದೆ. ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್ನ ಜೆಟ್ಸ್ಕೀ ಬೋಟ್ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್ಸ್ಕೀ ಮಗುಚಿ ಬಿದ್ದಿತ್ತು. ರೈಡ್ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ.
ಮುರ್ಡೇಶ್ವರ ನಿವಾಸಿಯಾದ ರೋಹಿದಾಸ್ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ ಸ್ಕೀ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು. ನಾಪತ್ತೆಯಾದ ರವಿದಾಸ್ ನ ಶೋಧ ಕಾರ್ಯ ನಡೆಯುತ್ತಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಪೊಲೀಸ್ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.