
ಬೀದರ್ : ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಬಹಳ ಬೇಡಿಕೆ ಇದೆ. ಅದರಲ್ಲೂ ಕರ್ನಾಟಕದ ವಿವಿಧ ನಗರಗಳಿಂದ ರಾಜಧಾನಿ ಬೆಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂದು ಬೇಡಿಕೆ ಇಡಲಾಗುತ್ತಿದೆ.
ಸದ್ಯ ಕರ್ನಾಟಕದಲ್ಲಿ 6ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಬೆಂಗಳೂರು-ಬೀದರ್ ಮಾರ್ಗದಲ್ಲಿ ಈ ಮಾದರಿ ರೈಲು ಬೇಕು ಎಂದು ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಬೀದರ್ ಸಂಸದ ಸಾಗರ್ ಖಂಡ್ರೆ ನವ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಕ್ಷೇತ್ರದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ಸಚಿವರ ಮುಂದೆ ಮಂಡಿಸಿದರು. ಈ ಸಂದರ್ಭದಲ್ಲಿ ಬೀದರ್- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎಂದು ಸಹ ಮನವಿ ಸಲ್ಲಿಕೆ ಮಾಡಲಾಗಿದೆ.
ವಂದೇ ಭಾರತ್ ರೈಲು: ಸಂಸದ ಸಾಗರ್ ಖಂಡ್ರೆ ಬೀದರ್ ಮತ್ತು ಬೆಂಗಳೂರಿನ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭಿಸಲು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಈ ರೈಲು ಸೇವೆಯಿಂದ ಉಭಯ ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾಗಿ, ಜನರಿಗೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದ್ದಾರೆ.
ಸಂಸದರು ಉಳಿದಂತೆ ಹಲವು ಯೋಜನೆಗಳ ಕುರಿತು ಸಚಿವರ ಗಮವನ್ನು ಸೆಳೆದಿದ್ದಾರೆ. ಯಶವಂತಪುರ-ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ನಂಬರ್ 16578/77) ಪ್ರಸ್ತುತ ಸ್ಥಗಿತಗೊಂಡಿದೆ. ಈ ರೈಲು ಸೇವೆಯನ್ನು ಪುನಃ ಆರಂಭಿಸಿ, ಅದನ್ನು ದೈನಂದಿನ ಸೇವೆಯಾಗಿ ಪರಿವರ್ತಿಸಲು ಒತ್ತಾಯಿಸಿದ್ದಾರೆ. ಇದರಿಂದ ಬೀದರ್ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಸುಧಾರಣೆ ಆಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.
ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗ. 2023ರಲ್ಲಿ ಅನುಮೋದನೆ ಪಡೆದ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಯನ್ನು ಬೀದರ್ ಲೋಕಸಭಾ ಕ್ಷೇತ್ರದ ಚಿಂಚೋಳಿ ತಾಲೂಕು ಮೂಲಕ ಮರುಸಮೀಕ್ಷೆ ಮಾಡುವಂತೆ ಸಂಸರು ವಿನಂತಿಸಿದ್ದಾರೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ವಿವರಿಸಿದ್ದಾರೆ.
ಸಂಸದರು ಸಲ್ಲಿಸಿದ ಇತರ ಬೇಡಿಕೆಗಳು
- ಸಿಎಸ್‌ಎಂಟಿ-ಬೀದರ್ ಎಕ್ಸ್‌ಪ್ರೆಸ್ (ರೈಲು ನಂಬರ್ 22143/ 44). ವಾರದಲ್ಲಿ ಮೂರು ದಿನ ಮಾತ್ರ ಲಭ್ಯವಿರುವ ಈ ರೈಲು ಸೇವೆಯನ್ನು ದೈನಂದಿನ ಸೇವೆಯಾಗಿ ಪರಿವರ್ತನೆ ಮಾಡುವಂತೆ ಕೋರಿದ್ದಾರೆ. ಇದರಿಂದ ಬೀದರ್, ಪುಣೆ, ಮತ್ತು ಮುಂಬೈನ ನಡುವಿನ ವ್ಯಾಪಾರ ಮತ್ತು ಉದ್ಯೋಗಾವಕಾಶಗಳು ಸುಧಾರಿಸುತ್ತವೆ ಎಂದು ಹೇಳಿದ್ದಾರೆ.
- ಬೀದರ್-ದೆಹಲಿ ನೇರ ರೈಲು ಸಂಪರ್ಕ. ದಕ್ಷಿಣ ಎಕ್ಸ್‌ಪ್ರೆಸ್ (ರೈಲು ನಂಬರ್ 12721/ 22) ಅನ್ನು ಬೀದರ್ ತನಕ ವಿಸ್ತರಿಸಲು ಮನವಿ ಮಾಡಿದ್ದಾರೆ. ಇದರಿಂದ ಬೀದರ್ ಜನತೆಗೆ ದೇಶದ ರಾಜಧಾನಿಯೊಂದಿಗೆ ನೇರ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
- ಬೀದರ್-ಪಂಡರಪುರ ರೈಲು. ಪಂಡರಪುರ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೀದರ್ ಮತ್ತು ಪಂಡರಪುರ ನಡುವಿನ ನೇರ ರೈಲು ಸೇವೆ ಪ್ರಾರಂಭಿಸಲು ಸಂಸದರು ಒತ್ತಾಯಿಸಿದ್ದಾರೆ.
- ಬೀದರ್-ನಾಂದೇಡ್ ಹೊಸ ರೈಲು ಮಾರ್ಗ (157 ಕಿ. ಮೀ.). 2018-19ರ ಬಜೆಟ್‌ನಲ್ಲಿ ಅನುಮೋದನೆಗೊಂಡ ಈ ಹೊಸ ಮಾರ್ಗವನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವಂತೆ ಸಂಸದರು ರೈಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ.