ಕುಂದಾಪುರ: ಕಾರ್ಮಿಕ ವರ್ಗಕ್ಕೆ ಮಾರಕವಾದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಕೇಂದ್ರ ಸರಕಾರ ಕೈ ಬಿಡಬೇಕು ಎಂಬುದಾಗಿ ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕರಾದ ಚಂದ್ರಶೇಖರ್ ವಿ ಇಂದಿಲ್ಲಿ ಹೇಳಿದರು. ಅವರು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರಕಾರ ಶ್ರೀಮಂತ ಉದ್ದಿಮೆದಾರರ ಪರವಾದ ನೀತಿಗಳು ಕಾರ್ಮಿಕರ ಶೋಷಣೆಯನ್ನು ಹೆಚ್ಚಿಸುವುದಾಗಿದೆ ಕಿರು ಕೈಗಾರಿಕೆಗಳಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ, ಅದನ್ನೇ ಅವಲಂಬಿಸಿದ ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿರುವ ಹಂಚು ಕಾರ್ಖಾನೆಗಳು ಇಂದು ಮಾರುಕಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದ, ಕಚ್ಚಾ ಸಾಮಗ್ರಿ ದೊರಕುತ್ತಿಲ್ಲ, ಈ ಸಂದರ್ಭದಲ್ಲಿ ಸರಕಾರ ಉದ್ದಿಮೆ ರಕ್ಷಣೆಗೆ ದಾವಿಸಬೇಕಾಗಿದೆ. ಗಣಿಗಾರಿಕೆ ಸಮಸ್ಯೆ ಉದ್ದಿಮೆಗೆ, ಮಾರಕವಾಗಿದೆ ಎಂದು ಅಭಿಪ್ರಾಯಿಸಿದರು. ಹಂಚು ಕಾರ್ಮಿಕ ಸಂಘದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಹಾಗು ಮಾಜಿ ಪುರಸಭಾ ಅಧ್ಯಕ್ಷರಾದ ವಿ ನರಸಿಂಹ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಯಾದ ಹೆಚ್ ನರಸಿಂಹ ಮಂಡಿಸಿದ ವಾರ್ಷಿಕ ಕರಡು ವರದಿ ಹಾಗು ಲೆಕ್ಕಪತ್ರವನ್ನು ಚರ್ಚೆಯ ನಂತರ ಅಂಗೀಕರಿಸಲಾಯಿತು. ಕುಂದಾಪುರ ಈ ಎಸ್ ಐ ಗೆ ಕಾಯಂ ವೈದ್ಯರ ನೇಮಕಾತಿ ಹಾಗು ಬ್ರಹ್ಮಾವರ 100 ಹಾಸಿಗೆಗಳ ಆಸ್ಪತ್ರೆ ಶೀಘ್ರ ತೆರೆಯಲು ಒತ್ತಾಯಿಸಿ,ಬೆಲೆಯೇರಿಕೆ ವಿರುದ್ಧ, ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ, ಆವೆ ಮಣ್ಣಿನ ಸರಬರಾಜಿಗೆ ಇರುವ ಆಕ್ಷೇಪ ಹಿಂಪಡೆಯಲು ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು.
ನೂತನ ಅಧ್ಯಕ್ಷರಾಗಿ ವಿ ನರಸಿಂಹ ಪುನರಾಯ್ಕೆ ಆದರು. ಪ್ರಧಾನ ಕಾರ್ಯದರ್ಶಿಯಾಗಿ ಎಚ್ ನರಸಿಂಹ, ಕೋಶಾಧಿಕಾರಿಯಾಗಿ ಪ್ರಕಾಶ್ ಕೋಣಿ ಪುನರಾಯ್ಕೆ ಆದರು.
ವಾರ್ಷಿಕ ಮಹಸಭೆಗೆ ಶುಭಕೋರಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಕೆ ಶಂಕರ್, ಬೀಡಿ ಕಾರ್ಮಿಕ ಸಂಘದ ಮುಖಂಡರಾದ ಮಹಾಬಲ ವೋಡರ್ಹೋಬಲಿ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ಮುಖಂಡರಾದ
ಬಲ್ಕಿಸ್ ಹಾಗು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೊತೆಕಾರ್ಯದರ್ಷಿಯಾದ ಸುರೇಂದ್ರ ಧನ್ಯವಾದ ನೀಡಿದರು.