ತೃತೀಯ ವಿಶ್ವ ಹವ್ಯಕ ಸಮ್ಮೇಳನ – ೨೩೦೦ ಕಿ.ಮೀ ದೂರದ ಅಹಿಚ್ಛತ್ರದಿಂದ ಜ್ಯೋತಿಗೆ ಚಾಲನೆ -ಕಹಳೆ ನ್ಯೂಸ್
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ಜ್ಯೋತಿಯನ್ನು ತರಲಾಗುತ್ತಿದ್ದು, ೨೩೦೦ ಕಿ.ಮೀ ದೂರದಿಂದ ತಂದಿರುವ ಜ್ಯೋತಿಯಿಂದ ದೀಪಬೆಳಗುವ ಮೂಲಕ ಡಿ.೨೭ ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ ವಿಧ್ಯುಕ್ತವಾಗಿ ನಡೆಯಲಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರಾಚೀನ ಅಹಿಚ್ಛತ್ರದ ಗ್ರಾಮದಲ್ಲಿರುವ ರಾಮದೇವಾಲಯದಿಂದ ‘ಅಹಿಚ್ಛತ್ರ ಜ್ಯೋತಿ’ಗೆ ಚಾಲನೆ ನೀಡಲಾಗಿದ್ದು, ಈ ದೇವಾಲಯದಲ್ಲಿ ಕಳೆದ ೫೦ ವರ್ಷದಿಂದ ಅಖಂಡ ಜ್ಯೋತಿಯು ಬೆಳಗುತ್ತಿದ್ದು, ಅಖಂಡ ಜ್ಯೋತಿಯಿಂದ ಶ್ರೀರಾಮದೇವರ ಸನ್ನಿಧಿಯಲ್ಲಿ ಜ್ಯೋತಿಯನ್ನು ಬೆಳಗಿಸಿಕೊಳ್ಳುವುದರ ಮೂಲಕ ಜ್ಯೋತಿ ಯಾತ್ರೆಗೆ ಶ್ರೀಕಾರ ಹಾಕಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಟ್ರಸ್ಟಿಗಳು, ಉತ್ತರ ಪ್ರದೇಶ ವ್ಯಾಪಾರ ಮಂಡಳಿಯ ಅಧ್ಯಕ್ಷರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದು ಅಹಿಚ್ಛತ್ರ ಜ್ಯೋತಿಗೆ ಶುಭ ಹಾರೈಸಿದರು.
ಉತ್ತರಕನ್ನಡದ ಹೈಗುಂದದಲ್ಲಿರುವ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಅಹಿಚ್ಛತ್ರ ಜ್ಯೋತಿಯ ಯಾತ್ರೆ ಆರಂಭವಾಯಿತು. ವಿ.ಡಿ ಭಟ್ ಮತ್ತು ತಂಡದವರು ಹೈಗುಂದದಿಂದ ಯಾತ್ರೆಯನ್ನು ಆರಂಭಸಿ, ಉತ್ತರ ಪ್ರದೇಶದ ಅಹಿಚ್ಛತ್ರಕ್ಕೆ ತೆರಳಿ ಅಲ್ಲಿಂದ ಅಖಂಡ ಜ್ಯೋತಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಶತಮಾನಗಳ ಹಿಂದೆ ದ್ರಾವಿಡ ಬ್ರಾಹ್ಮಣ ಪಂಗಡಕ್ಕೆ ಸೇರಿದ ಹವ್ಯಕರ ಪೂರ್ವಜರ ಕುಟುಂಬಗಳನ್ನು ಕದಂಬ ವಂಶದ ದೊರೆ ರಾಜಾ ಮಯೂರವರ್ಮ ಯಾಗಾದಿಕಾರ್ಯಕ್ಕಾಗಿ ಅಹಿಚ್ಛತ್ರದಿಂದ ಪುನಃ ಬನವಾಸಿಗೆ ಕರೆದುಕೊಂಡು ಬಂದನು ಎನ್ನುವುದು ಇತಿಹಾಸ. ಹಾಗಾಗಿ ಅಹಿಚ್ಛತ್ರದಿಂದ ಜ್ಯೋತಿಯನ್ನು ತಂದು, ಐತಿಹಾಸಿಕ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಲಾಗುತ್ತಿದ್ದು, ಐತಿಹಾಸಿಕ ಕಾರ್ಯಕ್ರಮದಲ್ಲಿ ಇದು ಚರಿತಾರ್ಹ ಕಾರ್ಯಕ್ರಮವಾಗಲಿದೆ. ಡಿ.೨೭ ರಿಂದ ಡಿ.೨೯ ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ.