ಕರ್ನಾಟಕದಲ್ಲಿ ಡಿ. 31ರಿಂದ ಸಾರಿಗೆ ನೌಕರರ ಮುಷ್ಕರ : ಸಾರಿಗೆ ಬಸ್ ಬಂದ್ : ಸರ್ಕಾರಕ್ಕೆ ನೋಟಿಸ್ ನೀಡಿದ ಸಾರಿಗೆ ನೌಕರರು-ಕಹಳೆ ನ್ಯೂಸ್
ಕೊಪ್ಪಳ: ಕರ್ನಾಟಕದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.31ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಬೆಳಗಾವಿ ಅಧಿವೇಶನದ ಸಮಯದಲ್ಲಿಯೇ ಮುಷ್ಕರ ನಡೆಸುವುದರ ಕುರಿತ ಸರ್ಕಾರಕ್ಕೆ ನೋಟಿಸ್ ನೀಡಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಸದ್ಯ, ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 31 ರಿಂದ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಸಾರ್ವಜನರು ಮತ್ತೊಮ್ಮೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಇದೆ. ಡಿಸೆಂಬರ್ 31ರಿಂದ ರಾಜ್ಯದಲ್ಲಿ ಮತ್ತೆ ಬಸ್ ಸ್ಥಗಿತಗೊಳ್ಳಲಿವೆ. ಕರ್ನಾಟಕದ ನಾಲ್ಕು ಸಾರಿಗೆ ನಿಗಮದ ಜಂಟಿ ಕ್ರಿಯಾ ಸಮಿತಿಯಿಂದ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಬಾಕಿಯಿರುವ 38 ತಿಂಗಳ ಹೆಚ್ಚಳದ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಡಿ. 30ರೊಳಗೆ ಸಮಸ್ಯೆ ಬಗೆಹರಿಸಿ
ಶಕ್ತಿ ಯೋಜನೆಯಿಂದ ನಿಗಮಗಳಿಗೆ ನೀಡಬೇಕಾದ 2100 ರೂಪಾಯಿ ಬಾಕಿ ನೀಡಬೇಕು, ನೌಕರರ ಬಾಕಿ ವೇತನ ಭತ್ಯೆ ನೀಡಬೇಕು, ವೇತನ ಪರಿಷ್ಕರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಯಲಿದೆ. ಈ ಹಿಂದೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಡಿಸೆಂಬರ್ 30 ರೊಳಗಾಗಿ ಸರಕಾರ ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಈಡೇರಿಸದಿದ್ದರೆ ಬಸ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿಯ ಗೌರವ ಅಧ್ಯಕ್ಷ ಯು.ಎಸ್.ಸೊಪ್ಪಿಮಠ ಹೇಳಿದ್ದಾರೆ.
ನಿವೃತ್ತ ಸಿಬ್ಬಂದಿ ಮೊರೆ ಹೋದ ಸರ್ಕಾರ
ಸಾರಿಗೆ ನೌಕರರು ಮುಷ್ಕರಕ್ಕೆ ನಿರ್ಧರಿಸುವ ಬೆನ್ನಲ್ಲೆ, ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶವನ್ನು ಹೊರಡಿಸಿದ್ದಾರೆ.
ಮೂವರು ನಿವೃತ್ತ ಸಿಬ್ಬಂದಿಗೆ ಬಾಕಿ ಪಾವತಿ ಚೆಕ್ ವಿತರಣೆ
ಡಿಸೆಂಬರ್ 31ರಿಂದ ಆರಂಭವಾಗುವ ಅನಿರ್ಧಿಷ್ಟಾವಧಿ ಮುಷ್ಕರ ತಡೆಯುವ ಉದ್ದೇಶದಿಂದ ರಾಮಲಿಂಗಾ ರೆಡ್ಡಿ 11,694 ನಿವೃತ್ತ ಸಿಬ್ಬಂದಿಗಳಿಗೆ 224.05 ಕೋಟಿ ರೂಪಾಯಿ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಆದೇಶವನ್ನು ನೀಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಆದೇಶವನ್ನು ಮಾತ್ರ ನೀಡಿಲ್ಲ. ಶನಿವಾರ ಮೂವರು ನಿವೃತ್ತ ಸಿಬ್ಬಂದಿಗೆ ಬಾಕಿ ಪಾವತಿ ಚೆಕ್ ಅನ್ನು ಸಾಂಕೇತಿಕವಾಗಿ ನೀಡಿದ್ದಾರೆ. ಉಳಿದವರಿಗೆ ಹಣ ಪಾವತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.