
ಸುರತ್ಕಲ್: ಮಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಸುರತ್ಕಲ್ ಮೂಲಸೌಕರ್ಯದಲ್ಲಿ ಮಾತ್ರ ತುಂಬಾ ಹಿಂದೆ ಬಿದ್ದಿದೆ. ಅದರಲ್ಲೂ ಬೆಳೆಯುವ ನಗರಕ್ಕೆ ಅತ್ಯಂತ ಅಗತ್ಯವಾಗಿ ರುವ ಒಳಚರಂಡಿ ಯೋಜನೆ ಇಲ್ಲಿ ಅವ್ಯವಸ್ಥಿತವಾಗಿದೆ.
ಏಳೆಂಟು ವರ್ಷಗಳ ಹಿಂದೆ ಎಡಿಬಿ ಯೋಜನೆಯಡಿ ನಗರದಲ್ಲಿ ನಿರ್ಮಾಣ ವಾದ ಒಳಚರಂಡಿ ಕಾಮಗಾರಿಗೆ ಬರೋಬ್ಬರಿ 218 ಕೋಟಿ ರೂ.
ವಿನಿಯೋಗಿಸಲಾಗಿದೆ. ಆದರೆ, ಅದೆಲ್ಲವೂ ಅರೆಬರೆಯಾಗಿದ್ದು, ಕಳಪೆ ಕಾಮಗಾರಿಯಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ.
ಸುರತ್ಕಲ್‌ನಲ್ಲಿ ವಾಣಿಜ್ಯ ಸಂಕೀರ್ಣಗಳು, ವಸತಿ ಸಂಕೀರ್ಣಗಳು, ಬೃಹತ್ ಶಾಪಿಂಗ್ ಸೆಂಟರ್‌ಗಳು ಹೆಚ್ಚುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮವೂ ಬೆಳೆಯುತ್ತಿದೆ. ಹೀಗಾಗಿ ವ್ಯವಸ್ಥಿತವಾಗಿ ಒಳಚರಂಡಿ ಯೋಜನೆ ಹಿಂದೆAದಿಗಿAತ ಇಂದು ಹೆಚ್ಚು ಅಗತ್ಯವಿದೆ.
ಅಚ್ಚರಿ ಎಂದರೆ ಒಳಚರಂಡಿ ವ್ಯವಸ್ಥೆ ಒದಗಿಸುತ್ತಿದ್ದೇವೆ ಎಂಬ ನೆಲೆಯಲ್ಲೇ ಮಹಾನಗರ ಪಾಲಿಕೆಯಿಂದ ತೆರಿಗೆ ಸಂಗ್ರಹ ನಡೆಯುತ್ತಿದೆ. ಆದರೆ, ಕೊಳಚೆ ನೀರು ಮಾತ್ರ ರಾಜ ಕಾಲುವೆಗಳಲ್ಲಿ, ಚರಂಡಿಗಳಲ್ಲಿ ಹರಿದು ಜನರ ಬದುಕನ್ನು ಅಸಹನೀಯ ಗೊಳಿಸಿದೆ. ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಯೋಜನೆ ಜಾರಿಗೊಳಿಸಬೇಕು ಎನ್ನುವುದು ಆ ಭಾಗದ ಜನರು ಮತ್ತು ಕಟ್ಟಡ ಮಾಲಕರ ಬೇಡಿಕೆ.
ಎಷ್ಟು ವ್ಯಾಪ್ತಿ, ಜನಸಂಖ್ಯೆ?
ಸುರತ್ಕಲ್ ವಿಭಾಗೀಯ ವ್ಯಾಪ್ತಿ: 8 ವಾರ್ಡ್ಗಳಿವೆ
ಒಟ್ಟು ಮನೆಗಳು: 6,800
ಜನ ಸಂಖ್ಯೆ: 19,000
ವಸತಿ ಸಮುತ್ಛಯ: 30ಕ್ಕೂ ಹೆಚ್ಚು
ಹೋಟೆಲ್‌ಗಳು: 30ಕ್ಕೂ ಹೆಚ್ಚು
ಸಮಗ್ರ ಯೋಜನೆಗೆ 24 ಕೋಟಿ ಬೇಕು
ಸುರತ್ಕಲ್ ವಿಭಾಗ ವ್ಯಾಪ್ತಿಯಲ್ಲಿ ಗುಡ್ಡೆಕೊಪ್ಲ ದಲ್ಲಿನ ವೆಟ್‌ವೆಲ್ ಕಾಮಗಾರಿ ಕಳಪೆಯಾಗಿದ್ದು,ಬೀಗ ಜಡಿಯಲಾಗಿದೆ. ತಡಂಬೈಲ್ ವೆಟ್‌ವೆಲ್‌ಗೆ ಓವರ್‌ಲೋಡ್ ಆಗುತ್ತಿದ್ದು ಕೆಲವು ಬಾರಿ ಕೊಳಚೆ ನೀರು ರಾಜಕಾಲುವೆ ಪಾಲಾಗಿ ಬಾವಿ ನೀರು ಕಲುಷಿತವಾಗುತ್ತಿದೆ. ಮಾಧವ ನಗರದ ಎಸ್‌ಟಿಪಿ ಅಂದಾಜು 4 ಕೋಟಿ ರೂ.ವೆಚ್ಚದಲ್ಲಿ ದುರಸ್ತಿ ಮಾಡಲಾಗಿದ್ದು, ಭಾಗಶಃ ಬಳಕೆಯಾಗುತ್ತಿದೆ. ಕಳೆದ 20 ವರ್ಷದ ಹಿಂದೆ ಹಾಕಲಾದ ಪೈಪ್‌ಗ್ಳಲ್ಲಿ ಬಿರುಕು ಮೂಡಿದ್ದು ಬದಲಾವಣೆಯ ಅಗತ್ಯವಿದೆ ಎಂಬುದು ತಜಲಿರ ಅಭಿಪ್ರಾಯವಾಗಿದೆ. ಸುರತ್ಕಲ್ ಭಾಗದಲ್ಲಿ ಸಮಗ್ರ ಒಳಚರಂಡಿ ಯೋಜನೆಗೆ 24 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ.
ಸAಸ್ಕರಣ ಘಟಕದ ಸುತ್ತಮುತ್ತ ಸೋರಿಕೆ
ಸುರತ್ಕಲ್‌ನ ಮಾಧವ ನಗರದಲ್ಲಿ ನಿರ್ಮಿಸಲಾದ ಎಸ್‌ಟಿಪಿ ಸಂಸ್ಕರಣ ಘಟಕವನ್ನು ಯಾವುದೇ ಪ್ರಾಯೋಗಿಕ ಪರಿಶೀಲನೆ ನಡೆಸದೆ ಎಡಿಬಿಯಿಂದ ಪಾಲಿಕೆ ತೆಕ್ಕೆಗೆ ತೆಗೆದುಕೊಳ್ಳಲಾಗಿತ್ತು. ಅದನ್ನು ಉದ್ಘಾಟಿಸಿ, ಸಂಪರ್ಕ ನೀಡಿದಾಗ ಘಟಕದ ಸುತ್ತಮುತ್ತ ಕೊಳಚೆ ನೀರು ಸೋರಿಕೆಯಾಗಿ ವಿಪರೀತ ಸಮಸ್ಯೆ ಎದುರಾಯಿತು. ಅಂತರ್ಜಲ ಕೆಟ್ಟು ಜನರಿಂದಲೇ ಈ ಯೋಜನೆಗೆ ವಿರೋಧ ವ್ಯಕ್ತವಾಯಿತು. ಕಳಪೆ ಕಾಮಗಾರಿಗೆ ಜನರು ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದೂ ಆಯಿತು.
ಶೇ. 90ರಷ್ಟು ವಿಫಲವಾದ ಈ ಯೋಜನೆಯನ್ನು ಅಮೃತ್ ಯೋಜನೆಯಿಂದ ಅನುದಾನ ಮೀಸಲಿಟ್ಟು ದುರಸ್ತಿ ಕಾರ್ಯ ಅಲ್ಲಲ್ಲಿ ಕೈಗೊಳ್ಳಲಾಗಿದೆಯಾದರೂ ಅನುದಾನ ಮಾತ್ರ ಸಾಲದೆ, ಇದುವರೆಗೂ ಸಂಪರ್ಕ ಸಾಧ್ಯವಾಗಿಲ್ಲ. ಮಾಧವ ನಗರದ ಸಂಸ್ಕರಣೆ ಘಟಕದ ಸುತ್ತಮುತ್ತ ತಗ್ಗು ಪ್ರದೇಶದಲ್ಲಿ ಒಳಚರಂಡಿ ನೀರು ಶೇಖರಣೆಯಾಗುತ್ತಿದ್ದು ಸುಳ್ಳೆ ಕಾಟ, ದುರ್ವಾಸನೆ ಬೀರುತ್ತಿದೆ. ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಕಂಡುಕೊಳ್ಳಲಾಗಿಲ್ಲ.
ಶೇ. 80 ಭಾಗದಲ್ಲಿ ಒಳಚರಂಡಿ ಇಲ್ಲ
ಸುರತ್ಕಲ್ ಜಂಕ್ಷನ್‌ನ ಪ್ರಮುಖ ಹೊಟೇಲ್ ಉದ್ಯಮಗಳಿಗೆ ಇಂದಿಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಒಂದು ಬಾರಿ ಸಂಪರ್ಕ ಕಲ್ಪಿಸಿದ ವೇಳೆ ವೆಟ್‌ವೆಲ್, ಪಿಟ್‌ಗಳ ಲೋಪದಿಂದ ತಗ್ಗು ಪ್ರದೇಶದಲ್ಲಿ ಸೋರಿಕೆಯಾಯಿತು. ಇದರಿಂದ ಹಲವೆಡೆ ಸಂಪರ್ಕ ನೀಡದೆ ಪಿಟ್‌ಗಳನ್ನು ಮಣ್ಣು ಇಲ್ಲವೆ ಜಲ್ಲಿ ಕಲ್ಲು ಹಾಕಿ ಮುಚ್ಚಲಾಗಿದೆ.
ಗುಡ್ಡೆಕೊಪ್ಲದ ವೆಟ್‌ವೆಲ್ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟು ಉಪಯೋಗಕ್ಕಿಲ್ಲದಂತಾಗಿದೆ. ಜಾಗ ಖರೀದಿ, ವೆಟ್ ವೆಲ್ ನಿರ್ಮಾಣಕ್ಕೆ ಲಕ್ಷಾಂತರ ರೂ. ವೆಚ್ಚ ಮಾಡಲಾಗಿದೆ.ಇದರ ಪುನರಾರಂಭಕ್ಕೆ ಸ್ಥಳೀಯರ ವಿರೋಧವಿದೆ. ಚೊಕ್ಕಬೆಟ್ಟು, ಸುರತ್ಕಲ್‌ನ ಪಶ್ಚಿಮ ಭಾಗ ಸಹಿತ ಶೇ.80ರಷ್ಟು ಭಾಗದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಇಲ್ಲ.
ಬೇಡಿಕೆ ಪರಿಗಣಿಸಿ ಕ್ರಮ
ಸುರತ್ಕಲ್ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಒಳಚರಂಡಿ ಜೋಡಣೆ ಪ್ರಮುಖ ಬೇಡಿಕೆ. ಈಗಾಗಲೇ ಮಾಡಲಾದ ಸೌಲಭ್ಯಗಳನ್ನು ದುರಸ್ತಿಗೊಳಿಸಲು ಕುಡ್ಸೆಂಪ್ ಮೂಲಕ ಅನುದಾನ ಮೀಸಲಿಟ್ಟು ಕಾಮಗಾರಿ ಮಾಡಲಾಗಿದೆ. ಸ್ಥಳೀಯರ ಬೇಡಿಕೆ ಪರಿಗಣಿಸಿ ಒಳಚರಂಡಿ ಸಂಪರ್ಕ ಕಲ್ಪಿಸಲು ಹೊಸ ಯೋಜನೆಯ ಅಗತ್ಯವಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.