“ಹವ್ಯಕ ಸಾಧಕ ರತ್ನ ಪ್ರಶಸ್ತಿ”ಗೆ ಆಯ್ಕೆಯಾದ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್- ಕಹಳೆ ನ್ಯೂಸ್
ಪುತ್ತೂರು: ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಗೋಪಾಲಕೃಷ್ಣ ಭಟ್ ರವರು ಅಖಿಲ ಹವ್ಯಕ ಮಹಾಸಭಾ(ರಿ.) ಬೆಂಗಳೂರು ಇವರು ಕೊಡಮಾಡುವ ‘ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಡಿ.27 ರಂದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಗೋಪಾಲಕೃಷ್ಣ ಭಟ್ ರವರ ಪರಿಚಯ..!!!
1983ನೇ ಇಸವಿ ಫೆಬ್ರವರಿ 21 ರಂದು ಪ್ರಸಿದ್ಧ ಕಿಜಕ್ಕಾರು ಮನೆತನದಲ್ಲಿ ಶ್ರೀಯುತ ಹರಿಕೃಷ್ಣ ಭಟ್ ಮತ್ತು ಶ್ರೀಮತಿ ಲಕ್ಷ್ಮಿಅಮ್ಮ ದಂಪತಿಯ ಸುಪುತ್ರನಾಗಿ ಪುತ್ತೂರಿನಲ್ಲಿ ಜನಿಸಿದ ಇವರ ಪ್ರಾಥಮಿಕ ಶಿಕ್ಷಣ ಕೆಯ್ಯೂರಿನಲ್ಲಿ ನಡೆಯಿತು. ಕಾಲೇಜು ಶಿಕ್ಷಣ ಪುತ್ತೂರು ಫಿಲೋಮಿನ ಕಾಲೇಜ್ ನಲ್ಲಿಯೂ, ಸಿವಿಲ್ ಡಿಪ್ಲೋಮವನ್ನು ಮಂಗಳೂರು ಐ. ಸಿ. ಎ ಕಾಲೇಜ್ ನಲ್ಲಿ ಪಡೆದರು. ತನ್ನ 21ನೇ ವಯಸ್ಸಿನಲ್ಲಿ ‘’ದ್ವಾರಕಾ ಕನ್ಸ್ರ್ಟಕ್ಷನ್ಸ್’’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸಿವಿಲ್ ಕಾಮಗಾರಿಗಳನ್ನು ಆರಂಭಿಸಿದ ಇವರು ಮುಂದೆ, ರಿಯಲ್ ಎಸ್ಟೇಟ್ ಉದ್ಯಮವನ್ನು ಸ್ಥಾಪಿಸಿ ಸುಮಾರು 10ಕ್ಕೂ ಅಧಿಕ ಅನುಮೋದಿತ ಬಡಾವಣೆಗಳನ್ನು ನಿರ್ಮಿಸಿರುತ್ತಾರೆ. ಗುಣಮಟ್ಟದ ಖಾತ್ರಿಗಾಗಿ ಪ್ರತಿಷ್ಠಿತ ISO ಪ್ರಮಾಣ ಪತ್ರವನ್ನು ಪಡೆದ ಸಂಸ್ಥೆ ಇವರದ್ದು. ಇದಲ್ಲದೇ ದ್ವಾರಕಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದ್ವಾರಕಾ ಕನ್ಸಲ್ಟೆನ್ಸಿ, ದ್ವಾರಕಾ ಸಿಮೆಂಟ್ ಪ್ರೋಡಕ್ಟ್, ದ್ವಾರಕಾ ಹಾರ್ಡ್ ವೇರ್ , ದ್ವಾರಕಾ ಅರ್ಥ್ ಮೂವರ್ಸ್, ದ್ವಾರಕಾ ಪ್ರತಿಷ್ಠಾನ ಎಂಬ ಸಹಸಂಸ್ಥೆಗಳನ್ನೂ, ತಮ್ಮ ತಂಡದೊಂದಿಗೆ ಮುಂದುವರಿಸುತ್ತಿದ್ದಾರೆ. ಹಾಗೆಯೇ ಸುಮಾರು 300ರಿಂದ 350ರಷ್ಟು ಕೆಲಸಗಾರರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ. ಇದುವರೆಗೂ ಸುಮಾರು 700+ ಪ್ರಾಜೆಕ್ಟ್ ನಿರ್ಮಿಸಿ ಹಸ್ತಾಂತರಿಸಿದ್ದಾರೆ. ಕೇವಲ ವೃತ್ತಿಯಲ್ಲಿ ಮಾತ್ರವಲ್ಲದೇ ಪ್ರವೃತ್ತಿಯಲ್ಲಿ ‘’ದ್ವಾರಕಾ ಪ್ರತಿಷ್ಠಾನ’’ ಎಂಬ ಸಂಸ್ಥೆಯ ಮುಖಾಂತರ ಸಮಾಜದ ವಸತಿರಹಿತರಿಗೆ ಸೂರು ಒದಗಿಸಲು ಕನಸಿನ ಮನೆ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ. ಅದೇ ರೀತಿ ತಮ್ಮ ಪ್ರತಿಷ್ಠಾನದ ದ್ವಾರಕಾ ಕಲಾಶಾಲೆ ಮೂಲಕ ಯಕ್ಷಗಾನ ಭಾಗವತಿಕೆ, ಚೆಂಡೆ-ಮದ್ದಳೆ, ಕೀ-ಬೋರ್ಡ್ ಮುಂತಾದ ತರಗತಿಗಳನ್ನು ಉಚಿತವಾಗಿ ಆಸಕ್ತ ಮಕ್ಕಳಿಗೆ ಕಲಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅದೇ ರೀತಿ ಬೇಸಿಗೆ ರಜೆಯಲ್ಲಿ ಆಸಕ್ತ ಮಕ್ಕಳಿಗಾಗಿ ಉಚಿತ ವಸಂತ ವೇದ ಪಾಠ ಶಿಬಿರವನ್ನು ನಡೆಸುತ್ತಿದ್ದಾರೆ. ಹಾಗೆಯೇ ತಮ್ಮ ತೋಟದ ಮನೆಯಲ್ಲಿ ಸುರಭಿ ಗೋ-ಶಾಲೆ ಎಂಬ ಗೋ-ಶಾಲೆ ಯನ್ನು ಕಳೆದ 11 ವರ್ಷಗಳಿಂದ ನಿರ್ವಹಿಸುತ್ತಾ ನಿರಾಶ್ರಿತ ಹೋರಿ ಹಾಗು ಹಸುಗಳಿಗೆ ಆಶ್ರಯ ನೀಡುತ್ತಿದ್ದಾರೆ. ಇದಲ್ಲದೇ ಪ್ರತೀ ಗುರುವಾರ ಮುಕ್ರುಂಪಾಡಿಯ ನಂದಗೋಕುಲ ವೇದಿಕೆಯ ಮೂಲಕ ‘’ಚಿಣ್ಣರ ವಿಕಸನ ಶಿಬಿರ’’ವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಾಗೆಯೇ ತಮ್ಮ ದ್ವಾರಕಾ ಪ್ರತಿಷ್ಠಾನದ ಮೂಲಕ ಪ್ರತಿ ವರ್ಷವೂ ‘’ ದ್ವಾರಕಾ ಪ್ರಕಾಶನ’’ದ ಅಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, ಈವರೆಗೆ ಸುಮಾರು 10ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿ ಆಸಕ್ತ ಓದುಗರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಹಾಗೆಯೇ ತಿಂಗಳ ಪ್ರತೀ ಮೂರನೇ ಭಾನುವಾರದಂದು ತಮ್ಮ ಪ್ರತಿಷ್ಠಾನದ ಮೂಲಕ ಸಮಾಜ ಮುಖೀ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು, ಮಕ್ಕಳಿಗಾಗಿ ರಾಮಾಯಣ, ಮಹಾಭಾರತ ಪರೀಕ್ಷೆಗಳನ್ನು ನಡೆಸಿ ಹತ್ತು ಹಲವು ಸಮಾಜಮುಖೀ ಕೆಲಸಗಳು ಮಾಡುತ್ತಾ ತಮ್ಮ ತಂಡದೊಂದಿಗೆ ಮುಂದುವರಿಯುತ್ತಿದ್ದಾರೆ.