ಕತಾರಿನಲ್ಲಿ ಸುಪ್ರಸಿದ್ಧ ನಟಿ ಹಾಗು ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಹಾಗೂ ಕನ್ನಡ ಚಲನ ಚಿತ್ರರಂಗದ ನಿರ್ಮಾಪಕ, ನಟ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ವಿಶೇಷ ಸನ್ಮಾನ-ಕಹಳೆ ನ್ಯೂಸ್
ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಅಶೋಕ ಸಭಾಂಗಣದಲ್ಲಿ ಸುಪ್ರಸಿದ್ಧ ನಟಿ ಹಾಗು ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಅವರಿಗೆ ಹಾಗೂ ಕನ್ನಡ ಚಲನ ಚಿತ್ರರಂಗದ ನಿರ್ಮಾಪಕ, ನಟ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಕರ್ನಾಟಕದಿಂದ ಆಗಮಿಸಿದ್ದ ಗಣ್ಯರು, ಕತಾರಿನ ದೋಹಾ ನಲ್ಲಿ ದಕ್ಷಿಣ ಭಾರತದ ಪ್ರತಿಭಾನ್ವೇಷಣೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ಐ ಸಿ ಸಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ್ ಕುಮಾರ್ ಅವರು ಗಣ್ಯರನ್ನು ಸ್ವಾಗತಿಸಿದ್ದರು. ಐ ಸಿ ಸಿ ಅಧ್ಯಕ್ಷರಾದ ಶ್ರೀ ಎ ಪಿ. ಮಣಿಕಂಠನ್ ಅವರು ಗಣ್ಯರ ಉಪಸ್ಥಿತಿಗಾಗಿ ಪ್ರಶಂಸೆಯನ್ನು ನೀಡಿ ವಂದಿಸಿದರು. ಭಾರತೀಯ ಕಲೆ ಹಾಗು ಸಂಸ್ಕೃತಿಗೆ ಇವರ ಕೊಡುಗೆಯನ್ನು ಶ್ಲಾಘಿಸಿದರು. ಭಾರತೀಯ ರಾಯಭಾರಿ ಕಾರ್ಯಾಲಯದ ಪ್ರಥಮ ಕಾರ್ಯದರ್ಶಿ ಹಾಗು ಐ ಸಿ ಸಿ. ನಿರ್ದೇಶಾಂಕ ಅಧಿಕಾರಿಯಾದ ಶ್ರೀ. ವೈಭವ್ ತಂಡಲೆ ಅವರು ಗಣ್ಯರನ್ನು ನೆನಪಿನ ಕಾಣಿಕೆ ನೀಡಿ ಗೌರವದಿಂದ ಸನ್ಮಾನಿಸಿದರು.
ಕರ್ನಾಟಕದಿಂದ ಆಗಮಿಸಿದ್ದ ಗಣ್ಯರು ಭಾರತೀಯ ದೂತಾವಾಸ ಹಾಗೂ ಐ ಸಿ ಸಿ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಪುನರುಚ್ಚರಿಸಿದರು. ಕರ್ನಾಟಕದ ಬೈಂದೂರಿನವರಾದ ಕತಾರಿನ ಐ ಸಿ ಸಿ ಉಪಾಧ್ಯಕ್ಷರಾಗಿರುವ ಶ್ರೀ. ಸುಬ್ರಮಣ್ಯ ಹೆಬ್ಬಾಗಿಲು ಅವರು ಕಾರ್ಯಕ್ರಮದ ವನೆಂದನಾರ್ಪಣೆ ಸಲ್ಲಿಸಿದರು.
ಐ ಸಿ ಸಿ ಆಡಳಿತ ಸಮಿತಿಯ ಸದಸ್ಯರು , ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಸಮುದಾಯದ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.