Saturday, January 11, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು: ಶಾಲೆಗಳಲ್ಲಿ ಈಜು ಕಲಿಕೆ ಕಡ್ಡಾಯವಾಗಲಿ-ಮುಳುಗು ತಜ್ಞ ಈಶ್ವರ ಮಲ್ಪೆ -ಕಹಳೆ ನ್ಯೂಸ್

ಮಂಗಳೂರು: ‘ಉಳ್ಳಾಲದ ರೆಸಾರ್ಟ್ನ ಪುಟ್ಟ ಈಜು ಕೊಳದಲ್ಲಿ ಈಚೆಗೆ ಮೂವರು ಯುವತಿಯರು ಈಜು ಬಾರದೇ ಮೃತ ಪಟ್ಟರು. ಅಲ್ಲಲ್ಲಿ ಮರುಕಳಿಸುವ ಇಂತಹ ಘಟನೆಗಳನ್ನು ತಪ್ಪಿಸಲು ಪ್ರತಿ ಶಾಲೆಯಲ್ಲೂ ಈಜುಕೊಳ ಹೊಂದಬೇಕು. ಶಾಲಾ ಹಂತದಲ್ಲಿ ಈಜು ಕಲಿಕೆಯನ್ನು ಕಡ್ಡಾಯಗೊಳಿಸಬೇಕು’ ಎಂದು ಮುಳುಗು ತಜ್ಞ ಈಶ್ವರ ಮಲ್ಪೆ ಹೇಳಿದರು.

ಇಲ್ಲಿನ ಮೂಲತ್ವ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ 10ನೇ ವರ್ಷದ ‘ಮೂಲತ್ವ ವಿಶ್ವ ಪ್ರಶಸ್ತಿ- 2024’ ಸ್ವೀಕರಿಸಿ ಅವರು ಮಾತಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಶಾಲೆಯಲ್ಲಿ ಎಲ್ಲ ರೀತಿಯ ಪಾಠಗಳನ್ನೂ ಕಲಿಸಲಾಗುತ್ತದೆ. ಆದರೆ ಜೀವ ರಕ್ಷಣೆಗೆ ಅಗತ್ಯವಾದ ಈಜನ್ನು ಕಲಿಸುತ್ತಿಲ್ಲ. ಈಜು ಗೊತ್ತಿದ್ದರೆ, ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲೂ ಜೀವ ಉಳಿಸಿಕೊಳ್ಳಬಹುದು. ಅಷ್ಟೇ ಅಲ್ಲ. ಇದನ್ನು ಕ್ರೀಡೆಯಾಗಿ ಅಭ್ಯಾಸ ಮಾಡಿದರೆ ಒಲಿಂಪಿಕ್ಸ್ನAತಹ ಕೂಟಗಳಲ್ಲಿ ಪದಕವನ್ನೂ ಗೆಲ್ಲಬಹುದು’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಜನರಿಗೆ ಕಷ್ಟಗಳು ಎದುರಾದಾಗ ದೇವರು ಸ್ವತಃ ಪ್ರತ್ಯಕ್ಷನಾಗುವುದಿಲ್ಲ. ಅವರಿಗೆ ಸಹಾಯ ಮಾಡುವ ಅವಕಾಶವನ್ನು ಮನುಷ್ಯರಾದ ನಮಗೆ ಕಲ್ಪಿಸುತ್ತಾನೆ. ಸಹಾಯಕ್ಕೆ ಧಾವಿಸುವ ಮನುಷ್ಯ ದೇವರ ಪ್ರತಿರೂಪದಂತೆ. ಇನ್ನೊಬ್ಬರಿಗೆ ಸಹಾಯ ಮಾಡುವ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳಬಾರದು’ ಎಂದರು.

‘ಸೇನೆಗೆ ಸೇರಬೇಕೆಂಬ ಬಾಲ್ಯದ ಕನಸು ಈಡೇರಲಿಲ್ಲ. ಮೀನುಗಾರನಾಗಿ ಹತ್ತು ವರ್ಷ ದುಡಿದ ಬಳಿಕ ಮಲ್ಪೆಯ ಕಡಲ ಕಿನಾರೆಯಲ್ಲಿ ನೀರುಪಾಲಾಗುವವರನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿದೆ. ಇದುವರೆಗೆ 80ಕ್ಕೂ ಹೆಚ್ಚು ಮಂದಿಯ ಜೀವಗಳನ್ನು ಉಳಿಸಿದ ತೃಪ್ತಿ ಇದೆ. ನೀರಿನಾಳದಿಂದ ಸಾವಿರಕ್ಕೂ ಅಧಿಕ ಮೃತದೇಹಗಳನ್ನು ಮೇಲೆತ್ತಿದ್ದೇನೆ. ಅನಾಥ ಶವಗಳ ವಾರಸುದಾರರು ಪತ್ತೆಯಾಗಿ, ಅಂತ್ಯಕ್ರಿಯೆ ಗೌರವಯುತವಾಗಿ ನಡೆದರೆ ನಮಗೂ ಸಮಾಧಾನ’ ಎಂದರು.

‘ನನ್ನ ಮೂರು ಮಕ್ಕಳೂ ಭಿನ್ನಸಾಮರ್ಥ್ಯದವರು. ಹಿರಿಯ ಮಗನನ್ನು ಈಗಾಗಲೇ ಕಳೆದುಕೊಂಡಿದ್ದೇನೆ. ಎರಡನೇ ಮಗ ಹಾಗೂ ಮಗಳು ನಡೆಯುವ ಸ್ಥಿತಿಯಲ್ಲಿರಲಿಲ್ಲ. ಅವರಿಗೆ ಕೇರಳದ ತಜ್ಞವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದೆ. ಜನರ ಪ್ರೀತಿ ಮತ್ತು ಆಶೀರ್ವಾದ ಫಲವಾಗಿ ಈಚೆಗೆ ಅವರಿಬ್ಬರೂ ನಡೆಯುವಷ್ಟು ಸುಧಾರಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ವೈಯಕ್ತಿಕ ಬದುಕಿನ ಬವಣೆಗಳನ್ನು ಮರೆಯಲು ಪ್ರಯತ್ನಿಸುತ್ತೇನೆ’ ಎನ್ನುವಾಗಿ ಕಣ್ಣಾಲಿಗಳು ತುಂಬಿದ್ದವು.

ಈಶ್ವರ್ ಮಲ್ಪೆ ಅವರಿಗೆ ಪ್ರಶಸ್ತಿಯ ಜೊತೆಗೆ ? 1 ಲಕ್ಷ ರೂಪಾಯಿ ನಗದು ಪ್ರದಾನ ಮಾಡಲಾಯಿತು.

ಮಂಗಳೂರು ಮೀನುಗಾರಿಕೆ ಕಾಲೇಜು ಡೀನ್ ಎಚ್.ಆಂಜನೇಯಪ್ಪ, ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ, ದೈಜಿವಲ್ಡ್ನ ವಾಲ್ಟರ್ ನಂದಳಿಕೆ, ಉಚ್ಚಿಲ ಮೊಗವೀರ ಮಹಾಸಭಾ ಉಪಾಧ್ಯಕ್ಷ ಮೋಹನ ಬೆಂಗ್ರೆ, ಟ್ರಸ್ಟಿಗಳಾದ ಕಲ್ಪನಾ ಪಿ.ಕೋಟ್ಯಾನ್, ಶೈನಿ ಲಕ್ಷ್ಮೀಶ ಪಿ.ಕೋಟ್ಯಾನ್ ಭಾಗವಹಿಸಿದ್ದರು.
ಟ್ರಸ್ಟ್ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಪ್ರಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರಲ್ಲಿ ಒಬ್ಬರಾದ ಪ್ರೊ.ರಾಜಮೋಹನ್ ರಾವ್ ಅಭಿನಂದನಾ ಪತ್ರ ವಾಚಿಸಿದರು.

‘ಶಿರೂರಿನಲ್ಲಿ ಜೀವನ್ಮರಣ ಸ್ಥಿತಿ ಎದುರಿಸಿದ್ದೆ’

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಭೂಕುಸಿತದಿಂದ ನೀರುಪಾಲಾದವರ ಮೃತದೇಹಗಳನ್ನು ಹುಡುಕುವ ವೇಳೆ ಜೀವನ್ಮರಣ ಸ್ಥಿತಿ ಎದುರಿಸಿದ್ದನ್ನು ಈಶ್ವರ್ ಮಲ್ಪೆ ಮೆಲುಕು ಹಾಕಿದರು. ‘ನದಿಯ ಆಳದಲ್ಲಿ ನೀರು ಹರಿವಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದೆ. ಧರಿಸಿದ್ದ ಜೀವರಕ್ಷಕ ಕವಚ ತೂತಾಗಿ ಗಾಳಿ ಖಾಲಿಯಾಗಿತ್ತು. ನೀರಿನಾಳದ ಕತ್ತಲಿನಿಂದ ಮೇಲೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಹೆಂಡತಿ ಮಕ್ಕಳ ಚಿತ್ರ ಕಣ್ಮುಂದೆ ಬಂದಿತ್ತು. ಧರಿಸಿದ್ದ 15 ಕೆ.ಜಿ. ತೂಕದ ಬೆಲ್ಟ್ ಕಿತ್ತೆಸೆದೆ. ಜನರ ಆಶಿರ್ವಾದದಿಂದ ಮೇಲೆ ಬಂದೆ’ ಎಂದು ವಿವರಿಸಿದರು.