ಅಡ್ಯನಡ್ಕ: ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ) ವತಿಯಿಂದ ಪಾಲಕರ ಸಮಾವೇಶ ಕಾರ್ಯಕ್ರಮವು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಡಿಸೆಂಬರ್ 29ರಂದು ನಡೆಯಿತು.
ಸುಂದರ ನಾಳೆಗೆ, ಪಾಲಕರ ಬೆಸುಗೆ ಹಾಗೂ ಸಮೃದ್ಧ ಸುಶಿಕ್ಷಿತ ಕುಟುಂಬ ಬಂಧಕ್ಕೆ ವಿಕಸನದ ದಿವ್ಯ ಸುಗಂಧ ಇದು ಸಮಾವೇಶದ ಘೋಷವಾಕ್ಯವಾಗಿತ್ತು. ಸಮಾವೇಶದಲ್ಲಿ ಮಕ್ಕಳ ವಿಕಸನದಲ್ಲಿ ಪಾಲಕರ ಸ್ನೇಹಶೀಲ ಸಹಭಾಗಿತ್ವ ವಿಷಯದಲ್ಲಿ ಚಿಂತನಗೋಷ್ಠಿ ನಡೆಯಿತು. ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ ಇದರ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ದೀಪ ಪ್ರಜ್ವಲನದ
ಮೂಲಕ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸದ್ಗುರುವನ್ನು ತೋರುವ ತಂದೆಯ ಸ್ಥಾನವು ಆಚಾರ್ಯರಿಗಿಂತಲೂ ಶ್ರೇಷ್ಠವಾದುದು. ಮಕ್ಕಳಲ್ಲಿ ಇಂದ್ರಿಯ ಚಪಲ ಬೆಳೆಯದಂತೆ ಉತ್ತಮ ವಿದ್ಯಾಭ್ಯಾಸ, ನಡೆ – ನುಡಿಯನ್ನು ಹೇಳಿಕೊಡುವುದು ಪಾಲಕರ ಜವಾಬ್ದಾರಿ ಎಂದರು.
ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯ ರಾಮಕುಂಜ ಇಲ್ಲಿನ ಪ್ರಾಂಶುಪಾಲ, ಸಾಹಿತಿ ಗಣರಾಜ ಕುಂಬ್ಳೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳು ಗೆಲುವಿಗೆ ಬೀಗದಂತೆ, ಸೋಲಿಗೆ ಕುಗ್ಗಿ ಹೋಗದಂತೆ ಪಾಲಕರು ಅವರನ್ನು ಬೆಳೆಸಬೇಕು. ಮಕ್ಕಳನ್ನು ಮತ್ತೊಬ್ಬರ ಜೊತೆಗೆ ಹೋಲಿಸಬಾರದು. ಸ್ವಾತಂತ್ರ‍್ಯ ಕೊಟ್ಟು ತಾರ್ಕಿಕತೆಯನ್ನು ಬೆಳೆಸಬೇಕು. ಸ್ವಾವಲಂಬಿಗಳಾಗುವುದಕ್ಕೆ ಹುರಿದುಂಬಿಸಬೇಕು ಎಂದು ಹೇಳಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು. ಅವರು ರೋಟರಿ ಕ್ಲಬ್ ಪುತ್ತೂರು ಹಾಗೂ ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ವತಿಯಿಂದ ಫೆಬ್ರುವರಿ 9ರಂದು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಆವರಣದಲ್ಲಿ ಆಯೋಜಿಸಿರುವ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು ಅವರು ಮುಖ್ಯ ಅತಿಥಿಯಾಗಿದ್ದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು ಅವರು ಪ್ರಾಸ್ತಾವಿಕವಾಗಿ
ಮಾತನಾಡಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಸ್ವಾಗತಿಸಿ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ಅವರು ವಂದಿಸಿದರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ.ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಅಡ್ಯನಡ್ಕ ಜನತಾ ಆಂಗ್ಲ ಮಾಧ್ಯಮ ಶಾಲೆಯ ಬೋಧಕ ವೃಂದದವರಿಗೆ ಆಂಗ್ಲ ಭಾಷಾ ಸಂವಹನ ತರಬೇತಿ ನೀಡಿದ ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನದ ಸಹಾಯಕ ವಿಜ್ಞಾನಿ ಡಾ. ನಿವೇದಿತಾ ರಾಮಕುಂಜ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಚೈತ್ರಾ ಅಮೈ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕಿ ಜಯಲಕ್ಷ್ಮಿ ಕೆ ಸನ್ಮಾನ ಪತ್ರ ವಾಚಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಕೇಶವ ಭಟ್ ಚವರ್ಕಾಡು, ಹರೀಶ್ ಬಳಂತಿಮೊಗರು, ಗೋವಿಂದರಾಯ ಶೆಣೈ ಅಡ್ಯನಡ್ಕ, ಹರಿಕೃಷ್ಣ ವಿ. ಎಂ. ಹಾಗೂ ಪ್ರಸನ್ನ ಮುಳಿಯಾಲ ಅವರು ಮಧ್ಯಾಹ್ನದ ಭೋಜನದ
ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು. ಜನತಾ ವಿದ್ಯಾಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳ ಪಾಲಕರು ಹಾಗೂ ನೆರೆಹೊರೆಯ ಪಾಲಕರು ಸಮಾವೇಶಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಶಿಕ್ಷಕಿ ಗೀತಾಕುಮಾರಿ ಡಿ. ಅವರು ಸ್ಫೂರ್ತಿ ಗೀತೆ ಹಾಡಿದರು. ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶೀನಪ್ಪ ನಾಯ್ಕ್ ಕೆ. ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಆಡಳಿತ ಮಂಡಳಿ ಸದಸ್ಯರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ಸಹಕರಿಸಿದರು.