ರಾಜ್ಯದಲ್ಲಿ ನಾಳೆ (ಜ.02) ಮಹಿಳಾ ಮೋರ್ಚಾದಿಂದ ಪ್ರತಿಭಟನೆ: ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಗೆ ಆಗ್ರಹ
ಬೆಂಗಳೂರು: ಬಾಣಂತಿಯರ ಸಾವನ್ನು ತಡೆಯಲು ವಿಫಲರಾದ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಮಂಜುಳಾ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬಾಣಂತಿಯರ ಸಾವನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಅವರು ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು ಎಂದು ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಲ್ಲಿವರೆಗೆ ಬಾಣಂತಿ ಸಾವಿನ ಸಂಬಂಧ ಒಬ್ಬರನ್ನೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ; ಅವರು ಕೂಡ ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು ಎಂದು ಒತ್ತಾಯಿಸಿದರು.
ಬಾಣಂತಿಯರ ಸಾವನ್ನು ಸರಕಾರ ನಿಲ್ಲಿಸದೆ ಇರುವುದನ್ನು ಖಂಡಿಸಿ ಇಡೀ ರಾಜ್ಯದಲ್ಲಿ, ಪ್ರತಿದಿನ 5 ಜಿಲ್ಲೆಗಳಲ್ಲಿ ರಾಜ್ಯ ಮಹಿಳಾ ಮೋರ್ಚಾ ಜಿಲ್ಲಾ ಘಟಕಗಳು ನಾಳೆಯಿಂದ ಪ್ರತಿಭಟನೆ ನಡೆಸಲಿವೆ ಎಂದ ಅವರು, ಇದೊಂದು ಲಜ್ಜೆಗೆಟ್ಟ ಸರಕಾರ. ಇಲ್ಲಿನವರೆಗೆ ಯಾವುದೇ ಸಚಿವರು ತೆರಳಿ ಭೇಟಿ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೃತ ಪ್ರತಿ ಬಾಣಂತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು. ಮಕ್ಕಳನ್ನು ಈ ಸರಕಾರ ದತ್ತು ಸ್ವೀಕಾರ ಮಾಡಿ, ಅವರಿಗೆ ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ಭದ್ರತೆಯನ್ನು ಕೊಡಬೇಕೆಂದು ಅವರು ಆಗ್ರಹಿಸಿದರು. ಕರ್ನಾಟಕದ ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರಕಾರವು ಹೊಸ ವರ್ಷದಲ್ಲಿ ರಾಜ್ಯದ ಮಹಿಳೆಯರಿಗೆ ಬಾಣಂತಿಯರ ಸಾವಿನ ಗ್ಯಾರಂಟಿಯನ್ನು ಕೊಟ್ಟಿದೆ ಎಂದು ಟೀಕಿಸಿದರು. ನಿನ್ನೆ ಕೊಪ್ಪಳದಲ್ಲಿ ಗರ್ಭಿಣಿ ಶ್ರೀಮತಿ ರೇಣುಕಾ ಹಿರೇಮನಿ ಎಂಬವರು ಸಾವನ್ನಪ್ಪಿದ್ದು, ಅವರು ಹೆರಿಗೆಗಾಗಿ ಬಂದಿದ್ದರು ಎಂದು ವಿವರಿಸಿದರು.
ಮೊದಲನೇ ಹೆರಿಗೆ ಸಂಬಂಧ ಕುಷ್ಟಗಿಗೆ ತವರು ಮನೆಗೆ ತೆರಳಿದ್ದ 23 ವರ್ಷದ ಅವರು, ಕುಷ್ಟಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು ಎಂದರಲ್ಲದೆ, ಇದೇನಾ ಸಿದ್ದರಾಮಯ್ಯರ ಸರಕಾರದ ಸಾವಿನ ಗ್ಯಾರಂಟಿ ಎಂದು ಪ್ರಶ್ನಿಸಿದರು. ಇದೊಂದು ಹೃದಯವಿದ್ರಾವಕ ಘಟನೆ. ನಾವೆಲ್ಲ ನೋವು ಅನುಭವಿಸುವಂತಾಗಿದೆ ಎಂದು ಹೇಳಿದರು.