Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಶುದ್ಧ ಜಲ ಅಭಿಯಾನ -ಕಹಳೆ ನ್ಯೂಸ್

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಈ ತಿಂಗಳು ಶುದ್ಧ ಜಲ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸುಮಾರು 1.50 ಲಕ್ಷ ಜನರಿಗೆ ಶುದ್ಧಜಲ ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ತಿಳಿಸಿದ್ದಾರೆ.

ಜನರಿಗೆ ಶುದ್ಧ ನೀರು ಕೊಡುವ ಉದ್ದೇಶಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಕರ್ನಾಟಕದಲ್ಲಿ ಸಮುದಾಯ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸುವ ನಿರ್ಧಾರ ಕೈಗೊಂಡರು. 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿಯಲ್ಲಿ ಮೊದಲ ಶುದ್ಧಕುಡಿಯುವ ನೀರಿನ ಘಟಕವನ್ನು ಹೇಮಾವತಿ ವಿ. ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ‘ಶುದ್ಧಗಂಗಾ’ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯದಲ್ಲಿ 481 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ನಿತ್ಯ ಸುಮಾರು 5.55ಲಕ್ಷ ಜನರು ಶುದ್ಧನೀರನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ 22 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ ಎಂದು ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶುದ್ಧಗಂಗಾ ಘಟಕಗಳು ಇರುವ ಪ್ರದೇಶದ ಜನರಿಗೆ ಜಾಗೃತಿ ಅಭಿಯಾನ ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು, ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಣಿ ಮೊದಲಾದ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಘಟಕ ಮೇಲ್ವಿಚಾರಕರು, ಪ್ರೇರಕರು, ಸ್ಥಳೀಯ ಕಾರ್ಯಕರ್ತರು ಹಾಗೂ ಪ್ರಗತಿಬಂಧು ಒಕ್ಕೂಟದ ಸದಸ್ಯರು ಇದರಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಪತ್ರ ಬಿಡುಗಡೆ: ಧರ್ಮಸ್ಥಳದಲ್ಲಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಶುದ್ಧಜಲ ಅಭಿಯಾನದ ಕರಪತ್ರವನ್ನು ಬುಧವಾರ ಬಿಡುಗಡೆ ಮಾಡಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್, ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಶುದ್ಧಗಂಗಾ ಮತ್ತು ಕೆರೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಶಿವಾನಂದ ಆಚಾರ್ಯ ಉಪಸ್ಥಿತರಿದ್ದರು.