2025ನೇ ಸಾಲಿನ ನೂತನ ವರ್ಷದ ಸಂಭ್ರಮಾಚಾರಣೆ ; ಭೂ ವರಹನಾಥ ದೇವಾಲಯ ಸೇರಿದಂತೆ ಕೆ.ಆರ್.ಪೇಟೆ ತಾಲೂಕಿನ ಧಾರ್ಮಿಕ ಕ್ಷೇತ್ರಗಳಿಗೆ ಹರಿದು ಬಂದ ಭಕ್ತ ಸಾಗರ.-ಕಹಳೆ ನ್ಯೂಸ್
2025ನೇ ಸಾಲಿನ ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ಇಂದು ಭೂ ವೈಕುಂಠವೆಂದೇ ಪ್ರಸಿದ್ಧವಾಗಿರುವ ಶ್ರೀ ಲಕ್ಷ್ಮೀ ಸಮೇತ ಭೂವರಹನಾಥ ಕಲ್ಲಹಳ್ಳಿ, ಕಾಪನಹಳ್ಳಿ ಗವಿ ಮಠ ಹಾಗೂ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಗಳಿಗೆ ಭಕ್ತ ಸಾಗರವೇ ಹರಿದು ಬಂದಿತ್ತು.
ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮೀ ವರಹನಾಥ ದೇವಾಲಯಕ್ಕೆ ಪ್ರವಾಹೋಪಾಧಿಯಲ್ಲಿ ಭಕ್ತರು ಆಗಮಿಸಿ ಸರತಿಯ ಸಾಲಿನಲ್ಲಿ ನಿಂತು ದೇಶದಲ್ಲಿಯೇ ಅಪರೂಪದ್ದಾಗಿರುವ 17 ಅಡಿ ಎತ್ತರದ ಭೂವರಹನಾಥ ಸ್ವಾಮಿಯ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯ ಮೂರ್ತಿಯನ್ನು ಕಣ್ಣು ತುಂಬಿಕೊಂಡರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಸಿಹಿ ಪೊಂಗಲ್, ಪುಳಿಯೋಗರೆ, ಬಿಸಿಬೇಳೆ ಭಾತ್, ಮೊಸರನ್ನ, ವಾಂಗಿ ಭಾತ್ ಪ್ರಸಾದವನ್ನು ವಿತರಿಸಲಾಯಿತು.
ಗಂಜಿಗೆರೆ ಗ್ರಾಮದಿಂದ ಭೂವರಹನಾಥ ಕ್ಷೇತ್ರದವರೆಗೆ ವಾಹನಗಳು ಸಾಲಾಗಿ ನಿಂತಿದ್ದು ಕಿಲೋ ಮೀಟರ್ ಗಟ್ಟಲೆ ಉದ್ದದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಗ್ರಾಮಾoತರ ಠಾಣೆಯ ಇನ್ಸ್ ಪೆಕ್ಟರ್ ಆನಂದೇಗೌಡ ವಾಹನಗಳ ಸಂಚಾರ ನಿಯಂತ್ರಿಸಲು ಹರಸಾಹಸ ಮಾಡಿದರು. ಪವಾಡ ಪುರುಷರಾದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆಯಿರುವ ಕಾಪನಹಳ್ಳಿ ಗವಿಮಠ ಹಾಗೂ ಮಹದೇಶ್ವರರು ಬಾಲಕರಾಗಿದ್ದಾಗ ಪವಾಡ ನಡೆಸಿರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಭೂ ವರಹನಾಥ ದೇವಾಲಯ ಅಭಿವೃದ್ಧಿ ಟ್ರಸ್ಟ್ ಸಂಚಾಲಕ ಡಾ.ಶ್ರೀನಿವಾಸ್ ರಾಘವನ್ ಅವರು ಇಂದಿನ ವಿಶೇಷ ದಿನದ ಅಂಗವಾಗಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು, ಹೋಮ ಹವನಗಳು ಹಾಗೂ ಅಭಿಷೇಕ ಕಾರ್ಯಕ್ರಮಗಳನ್ನು ನಡೆಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹಾಸನ ನಗರಸಭೆ ಅಧ್ಯಕ್ಷ ರವಿ, ತಹಶೀಲ್ದಾರ್ ಡಾ.ಯು. ಎಸ್.ಅಶೋಕ್, ರಾಜ್ಯದ ಮಾಜಿ ಸಚಿವರಾದ ಡಾ. ನಾರಾಯಣಗೌಡ ದಂಪತಿಗಳು, ಬೆಡದಹಳ್ಳಿ ಪಂಚಭೂತೇಶ್ವರ ಮಠದ ಶ್ರೀ. ರುದ್ರಮುನಿ ಸ್ವಾಮೀಜಿ, ತೆಂಡೇಕೆರೆ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಮನ್ ಮುಲ್ ನಿರ್ದೇಶಕ ಡಾಲು ರವಿ, ಮನಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಡಾ. ಅಂಚಿ ಸಣ್ಣಸ್ವಾಮಿಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ ಚಲನಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆ.ಆರ್. ಪೇಟೆ ಪುರಸಭೆ ಅಧ್ಯಕ್ಷೆ ಪಂಕಜ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು, ಸಮಾಜ ಸೇವಕರಾದ ಡಾ. ರೇವಣ್ಣ, ಶ್ರೀ ಚಾಮುಂಡೇಶ್ವರಿ ಟೂರ್ಸ್ ಟ್ರಾವೆಲ್ಸ್ ಮಾಲೀಕರಾದ ಬಾಬು ಲಿಂಗರಾಜ್ ಅರಸು ಸೇರಿದಂತೆ ಲಕ್ಷಾಂತರ ಜನರು ಇಂದು ನೂತನ ವರ್ಷಚರಣೆ ಸಂಭ್ರಮದ ಅಂಗವಾಗಿ ದೇವಾಲಯಗಳಿಗೆ ಭೇಟಿ ನೀಡಿದ್ದರು.