ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ ; ಸಚಿವ ಪ್ರಿಯಾಂಕ ಖರ್ಗೆಯನ್ನು ಸಂಪುಟದಿಂದ ಕಿತ್ತುಹಾಕಿ, ಸಿಬಿಐ ತನಿಖೆಗೆ ಒಪ್ಪಿಸಿ ; ಶಾಸಕ ವೇದವ್ಯಾಸ್ ಕಾಮತ್ ಆಗ್ರಹ – ಕಹಳೆ ನ್ಯೂಸ್
ಮಂಗಳೂರು, ಜ.1: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ತನ್ನ ಸಾವಿಗೂ ಮುನ್ನ ಏಳು ಪುಟಗಳ ಡೆತ್ ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ದುಷ್ಟಕೂಟದ ಸದಸ್ಯರ ಕರಾಳತೆಯನ್ನು ತೆರೆದಿಟ್ಟಿದ್ದಾರೆ. ತನಗಾದ ಮೋಸ, ಚಿತ್ರಹಿಂಸೆ ಸೇರಿದಂತೆ ಶ್ರೀರಾಮ ಸೇನೆಯ ಆಂದೋಲ ಸ್ವಾಮೀಜಿ, ಬಿಜೆಪಿ ಮುಖಂಡ ಚಂದು ಪಾಟೀಲ, ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ಹಲವು ಹಿಂದೂ ನಾಯಕರನ್ನು ಸುಪಾರಿ ಕೊಟ್ಟು ಹತ್ಯೆ ಮಾಡುವ ಸಂಚಿನ ಬಗ್ಗೆಯೂ ಬರೆದಿದ್ದಾರೆ. ಸಾಯುವ ಕ್ಷಣದಲ್ಲಿ ಯಾವ ವ್ಯಕ್ತಿಯೂ ಸುಳ್ಳು ಹೇಳಲ್ಲ. ಹೀಗಾಗಿ, ಇದು ಆಘಾತಕಾರಿ ವಿಷಯವಾಗಿದ್ದು ಎಲ್ಲ ಆರೋಪಗಳು ಸಚಿವ ಪ್ರಿಯಾಂಕ್ ಖರ್ಗೆ ಸುತ್ತವೇ ಗಿರಕಿ ಹೊಡೆಯುತ್ತಿವೆ. ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯನವರನ್ನೇ ಬ್ಲಾಕೇಲ್ ಮಾಡುತ್ತಿದ್ದಾರೆ ಎನಿಸುತ್ತದೆ. ಪ್ರಕರಣದ ತನಿಖೆಗೆ ಸಿಐಡಿ ಸಾಕು, ಬೇರಾವುದೇ ತನಿಖೆಯೂ ಬೇಡ ಎನ್ನುತ್ತಿದ್ದಾರೆ. ಇದಕ್ಕಾಗಿ ಎಲ್ಲ “ಸಿದ್ಧತೆಗಳನ್ನು ತೆರೆಮರೆಯಲ್ಲಿ ಮಾಡಿಕೊಳ್ಳುತ್ತಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಿಲುಕಿದ್ದ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದ ಸಿದ್ದರಾಮಯ್ಯನವರಿಗೆ ಪ್ರಿಯಾಂಕ ಖರ್ಗೆ ರಾಜೀನಾಮೆ ಪಡೆದುಕೊಳ್ಳಲು ಧೈರ್ಯವಿದೆಯೇ? ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೆ.ಎಸ್ ಈಶ್ವರಪ್ಪ ಪ್ರಕರಣ ಸೇರಿದಂತೆ ಸಣ್ಣ ಪುಟ್ಟ ವಿಷಯಕ್ಕೂ ಸಿದ್ದರಾಮಯ್ಯ ಪ್ರಿಯಾಂಕ ಖರ್ಗೆ ಸೇರಿ ಎಲ್ಲ ನಾಯಕರು ರಾಜೀನಾಮೆಗೆ ಆರ್ಭಟಿಸುತ್ತಿದ್ದರು. ಈಗ ಅವರೇ ಆರೋಪಿ ಸ್ಥಾನದಲ್ಲಿದ್ದು ಎಲ್ಲರೂ ಮೌನ ವಹಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ಕಾರಣದಿಂದಲೇ ಸಾಯುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮಾನ, ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರ ಅಟ್ಟಹಾಸ ಮಿತಿ ಮೀರಿದ್ದು ಅಲ್ಲಿ ಅನ್ಯಾಯದ ದರ್ಬಾರ್ ನಡೆಸುತ್ತಿದ್ದಾರೆ. ಪುಡಿ ರೌಡಿಗಳನ್ನು ಸಾಕಿಕೊಂಡು ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಆದರೆ ಒಬ್ಬ ಅಮಾಯಕನ ಸಾವಿನ ವಿಚಾರವನ್ನು ಬಿಜೆಪಿ ಇಷ್ಟಕ್ಕೇ ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಪ್ರಿಯಾಂಕ ಖರ್ಗೆಯವರನ್ನು ಬಂಧಿಸಬೇಕು ಮತ್ತು ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ ಉಪ ಮೇಯರ್ ಭಾನುಮತಿ, ಪೂರ್ಣಿಮಾ, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.