ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆದ ಕಂಬಳ ಸಮಿತಿ ಸಭೆ : ಕಂಬಳದ ಗಂತಿನಲ್ಲಿ ಕೋಣಗಳನ್ನು ಬಿಡುವುದು ವಿಳಂಬವಾದರೆ ನಿಷೇಧಕ್ಕೆ ನಿರ್ಧಾರ – ಕಹಳೆ ನ್ಯೂಸ್
ಮೂಡುಬಿದಿರೆ : ಕಂಬಳದ ಗಂತಿನಲ್ಲಿ ಕೋಣಗಳನ್ನು ಬಿಡುವವರು ವಿಳಂಬ ಮಾಡಿದ್ದು ಸಾಬೀತಾದರೆ 2 ಕಂಬಳಗಳಿಗೆ ನಿಷೇಧ ಹೇರಲು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ ಎಂದು ಒಂಟಿಕಟ್ಟೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳಗಳು ವಿಳಂಬವಾಗುತ್ತಿರುವುದರ ಬಗ್ಗೆ ಕಂಬಳ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಲಾಯಿತು.
ಕೋಣಗಳಿಗೆ ಅನಗತ್ಯವಾಗಿ ಹೊಡೆಯುವುದನ್ನು ನಿಲ್ಲಿಸದಿದ್ದರೆ ಅಂಥವರಿಗೂ 2 ಕಂಬಳದ ನಿಷೇಧ ಹೇರಲಾಗುವುದು ಎಂದು ಎಚ್ಚರಿಸಲಾಯಿತು.
ಮೂಲ್ಕಿ ಕಂಬಳ ಅನಗತ್ಯ ವಿಳಂಬವಾಗಿರುವುದಕ್ಕೆ ಅಮೆರಿಕದಿಂದ ಅಭಿಮಾನಿಯೊಬ್ಬರು ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಮಯದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿಯಮಗಳನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಆದರೂ ವಿಳಂಬ ಆಗುವುದು ಸರಿಯಲ್ಲ ಎಂದು ಹೇಳಲಾಯಿತು.
ಕೋಣಗಳ ಯಜಮಾನ ತ್ರಿಶಾಲ್ ಪೂಜಾರಿ ಮಾತನಾಡಿ, ಮೂಲ್ಕಿಯಲ್ಲಿ ಓಟಗಾರನ ಕಾಲಿಗೆ ಪೆಟ್ಟಾಗಿ ಆಸ್ಪತ್ರೆಗೆ ಆಟೊದಲ್ಲಿ ಸಾಗಿಸಲಾಗಿತ್ತು. ತುರ್ತು ಸಂದರ್ಭದಲ್ಲಿ ಬಳಸಲು ಕಂಬಳ ಆಯೋಜಕರು ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಕೇಂದ್ರವನ್ನು ಎಲ್ಲ ಕಂಬಳಗಳಲ್ಲಿ ಕಡ್ಡಾಯಗೊಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ತೀರ್ಪುಗಾರ ಸಮಿತಿಯ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಅಡ್ವೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಮೂಡುಬಿದಿರೆಯಲ್ಲಿ ಗುರುವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು