ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ; ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿಗೆ ನೋಟಿಸ್-ಕಹಳೆ ನ್ಯೂಸ್
ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಮಹಿಳೆಗೆ 3.25 ಕೋಟಿ ರೂ. ವಂಚಿಸಿದ ಪ್ರಕರಣದ ಆರೋಪಿ ಐಶ್ವರ್ಯಗೌಡ ಮನೆಯಲ್ಲಿ ಕೆ.ಜಿ.ಗಟ್ಟಲೇ ಬೆಳ್ಳಿ ವಸ್ತುಗಳು ಮಾತ್ರ ವಲ್ಲದೆ, ಐಷಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮತ್ತೂಂದೆಡೆ ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಗೌಡಗೆ 2ನೇ ಬಾರಿಗೆ ನೋಟಿಸ್ ನೀಡಲಾಗಿದೆ.
ಐಶ್ವರ್ಯಗೌಡ ಪತಿ ಹರೀಶ್ ಹೆಸರಿನಲ್ಲಿರುವ ಬಿಎಂಡಬ್ಲ್ಯೂ, ಫಾರ್ಚೂನರ್, ಆಡಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ದಂಪತಿ ಸುಮಾರು ವರ್ಷಗಳಿಂದ ಜ್ಯೂವೆಲ್ಲರಿ ಶಾಪ್ ಮಾಲಿಕರು ಹಾಗೂ ಕೆಲ ಶ್ರೀಮಂತರನ್ನು ವಂಚಿಸುತ್ತಿದ್ದು, ಇದೇ ಹಣದಿಂದಲೇ ಕಾರುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಮತ್ತೂಂದೆಡೆ ಕೆಲ ಆಪ್ತ ಜನಪ್ರತಿನಿಧಿಗಳು ಐಶ್ವರ್ಯಗೌಡ ಮತ್ತು ಪತಿ ಹರೀಶ್ ಚುನಾವಣೆ ಸಂದರ್ಭದಲ್ಲಿ ಆರ್ಥಿಕ ಸಹಾಯಕ ಮಾಡಿದ್ದಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2ನೇ ನೋಟಿಸ್ ಜಾರಿ: ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದುಕೊಂಡಿರುವ ಐಶ್ವರ್ಯಗೌಡ ಮತ್ತು ಪತಿ ಹರೀಶ್ ಈಗಾಗಲೇ ಪೊಲೀಸ್ ಕಸ್ಟಡಿಯಿಂದಲೇ ಬಿಡುಗಡೆಯಾಗಿದ್ದಾರೆ. ಆದರೆ, ಅಂದಿನಿAದ ಐಶ್ವರ್ಯಗೌಡ ನಾಪತ್ತೆಯಾಗಿದ್ದಾಳೆ. ಪತಿ ಹರೀಶ್ ಮನೆಯಲ್ಲೇ ಇದ್ದು, ಆತನ ಸಮ್ಮುಖದಲ್ಲೇ ಮನೆ ಶೋಧಿಸಿ ಚಿನ್ನಾಭರಣ, ಬೆಳ್ಳಿ, ಕಾರುಗಳ ಜಪ್ತಿ ಮಾಡಲಾಗಿದೆ. ಜತೆಗೆ ಕೆಲವೊಂದು ಮಾಹಿತಿ ಕೋರಿ ನೋಟಿಸ್ ಕೊಡಲಾಗಿತ್ತು. ಆದರೂ ಆಕೆ ಗೈರಾಗಿದ್ದಾಳೆ. ಹೀಗಾಗಿ ಗುರುವಾರ 2ನೇ ನೋಟಿಸ್ ನೀಡಲಾಗಿದ್ದು, ಎರಡು ದಿನಗಳ ಒಳಗೆ ಚಂದ್ರಲೇಔಟ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಶ್ವರ್ಯಗೌಡ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಅನುಮಾನ: ಐಟಿ ಇಲಾಖೆಗೆ ಪೊಲೀಸರಿಂದ ಮಾಹಿತಿ ಐಶ್ವರ್ಯಗೌಡ ಆದಾಯ ಮೂಲದ ಬಗ್ಗೆ ಕೆಲವೊಂದು ಅನುಮಾನಗಳಿದ್ದು, ಐಶ್ವರ್ಯಗೌಡ ದಂಪತಿ ಸಿಮೆಂಟ್ ಫ್ಯಾಕ್ಟರಿ ತೆರೆದಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಹಣದ ಮೂಲ ಯಾವುದು ಎಂಬುದು ತಿಳಿದುಬಂದಿಲ್ಲ. ಅಲ್ಲದೆ, ಐದಾರು ಮಂದಿಗೆ 40 ಕೋಟಿ ರೂ. ಅಧಿಕ ವಂಚನೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಈಕೆಯ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.