Monday, January 6, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಮನೆಯಲ್ಲೇ ವಿದ್ಯುತ್ ಉತ್ಪಾದಿಸಿ ಸ್ವಾಭಿಮಾನದಿಂದ ಬಳಸಿ: ಪ್ರಲ್ಹಾದ ಜೋಶಿ-ಕಹಳೆ ನ್ಯೂಸ್

ಮಂಗಳೂರು: ‘ಸರ್ಕಾರಕ್ಕೆ ಕೈಯೊಡ್ಡುವ ಬದಲು ಮನೆಯಲ್ಲೇ ವಿದ್ಯುತ್ ಉತ್ಪಾದಿಸಿ ಸ್ವಾಭಿಮಾನದಿಂದ ಬಳಸಿ’ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಲ್ಲ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯಿತಿ ಹಾಗೂ ಮಂಗಳೂರು ವಿದ್ಯುತ್ ಪೂರೈಕೆ ಕಂಪನಿ (ಮೆಸ್ಕಾಂ) ಆಶ್ರಯದಲ್ಲಿ ಇಲ್ಲಿ ಗುರುವಾರ ಏರ್ಪಡಿಸಿದ್ದ ‘ಪ್ರಧಾನಿ ಮಂತ್ರಿ ಸೂರ್ಯ ಘರ್‌ ಉಚಿತ ವಿದ್ಯುತ್‌’ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ಮತ್ತು ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಉಚಿತ ವಿದ್ಯುತ್‌ ನೀಡುವಾಗ ಅದಕ್ಕೆ ತಗಲುವ ವೆಚ್ಚವನ್ನು ಭರಿಸುವುದು ಯಾರು, ಅದು ಎಷ್ಟು ದಿನ‌ ನಡೆಯಬಹುದು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಪಿ.ಎಂ.ಸೂರ್ಯ ಘರ್‌ ಹಾಗಲ್ಲ. ಭೂಮಿಯ ತಾಪಮಾನ ಕಡಿಮೆಗೊಳಿಸುವ ಹಾಗೂ ಮುಂದಿನ ತಲೆಮಾರಿನವರೂ ಸುರಕ್ಷಿತವಾದ ಬದುಕು ಕಟ್ಟಿಕೊಳ್ಳಲು ನೆರವಾಗುವ ಬಹುದೊಡ್ಡ ಸುಸ್ಥಿರ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿಯವರ ದೂರಾಲೋಚನೆಗೂ ಇತರ ಉಚಿತ ಕಾರ್ಯಕ್ರಮಗಳನ್ನು ನೀಡುವವರ ಯೋಚನೆಗೂ ಇರುವ ವ್ಯತ್ಯಾಸವನ್ನು ನೀವೇ ಗುರುತಿಸಬಹುದು. ಈ ಯೋಜನೆಗೆ ಜನಪ್ರತಿನಿಧಿಗಳೇ ರಾಯಭಾರಿಗಳಾಗಬೇಕು’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಜಾಗತಿಕ ತಾಪಮಾನ ಹೆಚ್ಚಳದ ಅಡ್ಡ ಪರಿಣಾಮಗಳ ಕುರಿತು ಚರ್ಚೆ ಶುರುವಾಗಿದೆ. ದೇಶದ ಹಲವೆಡೆ 2024ರಲ್ಲಿ ವಾತಾವರಣದ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 2050ರ ವೇಳೆಗೆ ಶೇ 19ರಷ್ಟು ಜಿಡಿಪಿ ಕಡಿತವಾಗಲಿದೆ. ನವೀಕರಿಸಬಲ್ಲ ಮೂಲಗಳ ವಿದ್ಯುತ್ ಬಳಕೆ ಹೆಚ್ಚಿಸುವುದೇ ಇದಕ್ಕೆ ಪರಿಹಾರ. ಹತ್ತು ವರ್ಷಗಳಿಂದ ನವೀಕರಿಸಬಲ್ಲ ಮೂಲಗಳಾದ ಈಚೆಗೆ ಸೌರ ವಿದ್ಯುತ್, ಪವನ ವಿದ್ಯುತ್, ಜಲವಿದ್ಯುತ್‌, ಅಣುವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಇವುಗಳಿಗೆ ಒಮ್ಮೆ ಹೂಡಿಕೆ ಮಾಡಿದರೆ ಸಾಕು. ಪರಿಸರಕ್ಕೂ ಹಾನಿ ಕಡಿಮೆ. ಅಂತಹ ಪರಿವರ್ತನೆ ಆರಂಭವಾಗಿದೆ’ ಎಂದರು.

‘ದೇಶದಲ್ಲಿ 30 ಗಿ.ವ್ಯಾ ವಿದ್ಯುತ್ ಅನ್ನು ಸೂರ್ಯಘರ್‌ ಯೋಜನೆಯಿಂದ ಉತ್ಪಾದಿಸಿ, ತನ್ಮೂಲಕ 70 ಗಿ.ವ್ಯಾ. ವಿದ್ಯುತ್‌ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುವ ಉದ್ದೇಶ ಇದೆ. 3 ಕಿಲೋ ವಾಟ್‌ ವರೆಗೆ ಸೌರ ವಿದ್ಯುತ್ ಉತ್ಪಾದನೆಗೆ ₹78 ಸಾವಿರ ಸಬ್ಸಿಡಿ ಸಿಗಲಿದೆ. ₹ 1.20 ಲಕ್ಷ ಸಾಲ ಪಡೆದು, ₹20 ಸಾವಿರವನ್ನು ಫಲಾನುಭವಿಗಳೇ ಭರಿಸಬೇಕು. ವರ್ಷದ 365 ದಿನಗಳಲ್ಲಿ ಇಲ್ಲಿ ಸರಾಸರಿ 300 ದಿನ ಒಳ್ಳೆ ಬಿಸಿಲು ಲಭ್ಯ. ಐವರು ಸದಸ್ಯರ ಕುಟುಂಬಕ್ಕೆ ತಿಂಗಳಿಗೆ 150ರಿಂದ 200 ಯೂನಿಟ್ ವಿದ್ಯುತ್ ಧಾರಾಳವಾಗಿ ಸಾಕು. 3 ಕಿ.ವಾ ಘಟಕದಿಂದ ತಿಂಗಳಿಗೆ 350 ಯೂನಿಟ್‌ವರೆಗೂ ವಿದ್ಯುತ್‌ ಉತ್ಪಾದಿಸಿ, ಮೆಸ್ಕಾಂಗೆ 150 ಯೂನಿಟ್ ಮಾರಬಹುದು. ವಿದ್ಯುತ್‌ ಬಿಲ್‌ನಿಂದ ಉಳಿತಾಯವಾಗುವ ಮೊತ್ತವೇ ಸಾಲದ ಕಂತನ್ನು ತೀರಿಸಲು ಸಾಕು’ ಎಂದು ಜೋಶಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಭವಿಷ್ಯದಲ್ಲಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ನಾಯಕತ್ವ ಒದಗಿಸುವ ಯೋಜನೆ ಇದು. ಇದನ್ನು ಅಳವಡಿಸಿ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿ’ ಎಂದರು.
ಶಾಸಕರಾದ ಡಾ.ಭರತ ಶೆಟ್ಟಿ, ರಾಜೇಶ ನಾಯ್ಕ್, ಹರೀಶ್ ಪೂಂಜಾ, ಭಾಗಿರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್,
ಉಪಮೇಯರ್ ಭಾನುಮತಿ ಪಿ.ಎಸ್, ಮೆಸ್ಕಾಂ ವ್ಯವಸ್ಥಾಪನ ನಿರ್ದೇಶಕ ಕೆ.‌ ಜಯಕುಮಾರ್ ಆರ್. ಮೆಸ್ಕಾಂ ನಿರ್ದೇಶಕ (ತಾಂತ್ರಿಕ) ಮಹದೇವ ಸ್ವಾಮಿ, ಸೂಪರಿಂಟೆಂಡಿಂಗ್ ಎಂಜಿನಿಯರ್‌ ಕೃಷ್ಣರಾಜ್ ಜೆ. ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಶೆಟ್ಟಿ ಭಾಗವಹಿಸಿದ್ದರು.

‘ಬ್ಯಾಟರಿ ಸುಧಾರಣೆ- ಕ್ರಾಂತಿಗೆ ನಾಂದಿ’

ಸೌರಶಕ್ತಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಸಾಗುತ್ತಿರುವ ಭಾರತ ಬ್ಯಾಟರಿ ಇಂಧನ ಸಂಗ್ರಹಣೆಯ ತಂತ್ರಜ್ಞಾನ ಸುಧಾರಣೆಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಕಡಿಮೆ ದರಕ್ಕೆ ಸೌರ ವಿದ್ಯುತ್ ಉತ್ಪಾದನೆ ಇದರಿಂದ ಸಾಧ್ಯವಾಗಲಿದೆ. ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹ ಸಾಮರ್ಥ್ಯವೂ ಹೆಚ್ಚಳವಾಗಲಿದೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೆ ಇದು ಕಾರಣವಾಗಲಿದೆ’ ಎಂದು ಪ್ರಲ್ಹಾದ ಜೋಶಿ ತಿಳಿಸಿದರು. ‘ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಭಾರತ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲೂ ಉತ್ಪಾದನೆ ಮತ್ತು ಹೂಡಿಕೆ ಸಾಕಷ್ಟು ಪ್ರಮಾಣದಲ್ಲಿ ಆಗಬೇಕಿದೆ. ಜಗತ್ತಿನ ಉತ್ಪಾದನಾ ಹಬ್‌ ಆಗಿ ಭಾರತ ಬೆಳೆಯುವ ಮೂಲಕ ಚೀನಾಕ್ಕಿರುವ ‘ಜಾಗತಿಕ ಕಾರ್ಖಾನೆ’ ಪಟ್ಟವು ನಮ್ಮ ದೇಶಕ್ಕೆ ಸಿಗಲಿದೆ’ ಎಂದರು.