ದಾವಣಗೆರೆ: ನಗರದ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗಾರಿ ಬಾರಿಸುವುದು ಹಾಗೂ ಅಡಿಕೆ ಹೊಂಬಾಳೆ ಬಿಡಿಸುವ ಮೂಲಕ ಚಾಲನೆ ನೀಡಿದರು.
ಯುವಜನೋತ್ಸವ ನಿಮಿತ್ತ ಬೆಳಿಗ್ಗೆ ವಿವಿಧ ಜಾನಪದ ಕಲಾ ಪ್ರಕಾರಗಳ ಮೆರವಣಿಗೆ ನಡೆಯಿತು. ಕಲಾ ಮೆರವಣಿಗೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು, ಜನಪದ ನೃತ್ಯ, ಜಾನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕವನ ರಚನೆ ಮತ್ತು ಕಥೆ ಬರೆಯುವುದು, ಚಿತ್ರಕಲೆ, ಭಾಷಣ ಸ್ಪರ್ಧೆಗಳು ನಗರದ ವಿವಿಧೆಡೆ ಸಂಘಟಿಸಲಾಗಿದೆ.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಯುವಜನೋತ್ಸವ ಆಯೋಜಿಸಲಾಗಿದೆ.