ನರೇಂದ್ರ ಪ. ಪೂ. ಕಾಲೇಜಿನಲ್ಲಿ ಮಕರ ಸಂಕ್ರಾಂತಿಯ ಆಚರಣೆಯ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ-ಕಹಳೆ ನ್ಯೂಸ್
ಪುತ್ತೂರು:ಬ್ರಹ್ಮಾಂಡದ ಅಚಿಂತ್ಯ ಶಕ್ತಿಗಳ ಪ್ರಮುಖ ಸಂಚಾಲಕನಾಗಿ ಇಡೀ ವಿಶ್ವವನ್ನೇ ಮುನ್ನಡೆಸುವವ ಸೂರ್ಯ ದೇವರು.ಸಂಕ್ರಮಣ ಎಂದರೆ ಸೂರ್ಯ ದೇವರ ಹಬ್ಬ. ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಪ್ರವೇಶಿಸುವ ಅಥವಾ ಹೆಜ್ಜೆ ಇಡುವ ಶುಭಾವಸರಕ್ಕೆ ಸಂಕ್ರಾಂತಿಯ ಅಥವಾ ಸಂಕ್ರಮಣ ಎನ್ನುತ್ತಾರೆ.
ಈ ಕಾಲದಲ್ಲಿ ಸೂರ್ಯ ದೇವರು ತನ್ನ ಪಥವನ್ನು ಉತ್ತರ ದಿಕ್ಕಿಗೆ ಬದಲಿಸುತ್ತಾರೆ.ಮಕರ ಸಂಕ್ರಾಂತಿಯ ಉತ್ತರಾಯಣವನ್ನು ಸೂಚಿಸುವುದು. ಈ ಮಕರ ಸಂಕ್ರಾಂತಿಯ ಪರ್ವಕಾಲದ ಉತ್ತರಾಯಣ ಪುಣ್ಯಕಾಲದಲ್ಲಿ
ಸ್ವರ್ಗದ ಬಾಗಿಲು ತೆರೆಯುವುದು ವಿಶೇಷ. ಹಾಗಾಗಿ ಮಾನವರು ತಮ್ಮ ಬದುಕನ್ನು ಸುಂದರಗೊಳಿಸಿಕೊಂಡು ಭಗವಂತನಲ್ಲಿ ಲೀನಗೊಳಿಸಲು ಇದು ಸರ್ವ ಶ್ರೇಷ್ಠ ಕಾಲವಾಗಿದೆ.
ದೇಶದೆಲ್ಲೆಡೆ ಮಕರ ಸಂಕ್ರಾಂತಿಯ ಆಚರಣೆಯ ವಿಧಿ ವಿಧಾನಗಳು ಬೇರೆ ಬೇರೆಯಾದರೂ ಮಕರ ಸಂಕ್ರಾಂತಿಯ ಹಬ್ಬದ ಆಚರಣೆಯ ಹಿಂದಿನ ಉದ್ದೇಶ ಮಾತ್ರ ಸುಖ, ಸಮೃದ್ಧಿ ಆಗಿದೆ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀಮತಿ ವೀಣಾ ಇವರು ಹೇಳಿದರು.
ನರೇಂದ್ರ ಪ ಪೂ ಕಾಲೇಜಿನಲ್ಲಿ ನಡೆದ ಮಕರ ಸಂಕ್ರಾಂತಿಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕರ ಸಂಕ್ರಾಂತಿಯ ಎಳ್ಳು ಬೆಲ್ಲದ ಹಬ್ಬ ಆಗಿರುವುದು ವಿಶೇಷ. ಎಳ್ಳು ಪಾಪನಾಶಕವಾದ್ದರಿಂದ ತಿಲ ಹೋಮ, ತಿಲದಾನ, ಮಾನವನ ಇಹದ ಪಾಪನಾಶವಾಗಿ ಪರದಲ್ಲಿ ಮುಕ್ತಿ ಲಭಿಸಲಿದೆ. ದೇಹ ಬಲ ವೃದ್ಧಿಯಾಗಿ ಆಯುರಾರೋಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.
ಈ ಹಬ್ಬದ ಆಚರಣೆ ಕೇವಲ ನಂಬಿಕೆಗೆ ಸೀಮಿತವಾಗಿರದೆ ಆಧ್ಯಾತ್ಮಿಕ, ನೈಸರ್ಗಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದೆ. ಮಾನವ ಮತ್ತು ಪ್ರಕೃತಿ ನಡುವಿನ ಸಂಬAಧವನ್ನು ಮತ್ತಷ್ಟು ಸದೃಢಗೊಳಿಸುವ
ಆಶಯದೊಂದಿಗೆ ಎಳ್ಳು ಬೆಲ್ಲದ ಸವಿರುಚಿ ನಮ್ಮ ಜೀವನದುದ್ದಕ್ಕೂ ಮೇಳೈಸಲಿ ಎಂಬ ಉದಾತ್ತ ಚಿಂತನೆ ಈ ಹಬ್ಬದ ಆಚರಣೆ ಹಿಂದಿದೆ. ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ರೇಣುಕಾ ಸ್ವಾಗತಿಸಿ ವಂದಿಸಿದರು.