ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 38 ದಿನಗಳ ಬಳಿಕ ಎಸ್’ಐಟಿ ರೇಖಾಚಿತ್ರ ರಿಲೀಸ್ ಮಾಡಿದೆ. ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್’ಐಟಿ ತಂಡ, ಮೂವರು ಹಂತಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿತು. ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಸಿಪಿ ಅನುಚೇತ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಮೂವರಲ್ಲಿ ಪ್ರಮುಖ ಇಬ್ಬರನ್ನು ಗುರುತಿಸಲಾಗಿದೆ. ತಾಂತ್ರಿಕತೆ ಮತ್ತು ಸ್ಥಳೀಯರ ಸಹಾಯದಿಂದ ಆ ಇಬ್ಬರನ್ನು ಗುರುತಿಸಲಾಗಿದೆ. ಗುರುತಿಸಲಾದ ಇಬ್ಬರು 1 ವಾರದಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ರು. ಬೆಂಗಳೂರಿನಲ್ಲಿ 7 ದಿನ ವಾಸವಿದ್ದು ಗೌರಿಯನ್ನ ಹತ್ಯೆಗೈದಿದ್ದಾರೆ.
ವೃತ್ತಿ ನಿರತ ಹಂತಕರಿಂದಲೇ ಗೌರಿ ಹತ್ಯೆಯಾಗಿದೆ ಅಂತ ಅಧಿಕಾರಿಗಳು ಹೇಳಿದ್ರು. ನರೇಂದ್ರ ದಾಬೋಲ್ಕರ್ ಹಂತಕರಿಗೂ ಗೌರಿ ಹಂತಕರಿಗೂ ಸಾಮ್ಯತೆ ಇಲ್ಲ. ಹತ್ಯೆಯಲ್ಲಿ ಸನಾತನ ಸಂಸ್ಥೆಯ ಇದೆ ಎನ್ನುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂಬುದನ್ನ ತನಿಖಾಧಿಕಾರಿಗಳು ಸ್ಪಷ್ಟಪಡಿಸಿದರು.
ಗೌರಿ ಲಂಕೇಶ್’ರನ್ನು ಕೊಲ್ಲಲು ಹಂತಕರು 7.65 ಕಂಟ್ರಿಮೇಡ್ ಗನ್’ನ್ನು ಉಪಯೋಗಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ತಿಳಿಸಿದರು. ಈವರೆಗೆ 250ಕ್ಕೂ ಹೆಚ್ಚು ಜನರನ್ನು ತನಿಖೆ ನಡೆಸಿದ್ದೇವೆ ಎಂದೂ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಮಾಹಿತಿ ನೀಡಿದರು.
ಇದೇ ವೇಳೆ, ಹಂತಕರನ್ನು ನೋಡಿದರೆನ್ನಲಾದ ಕೆಲ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಿ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಸ್ಥಳೀಯರ ಹೇಳಿಕೆ ಹಾಗೂ ಗೌರಿ ಲಂಕೇಶ್ ಅವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ 10 ಸೆಕೆಂಡ್ ದೃಶ್ಯಾವಳಿ ಆಧರಿಸಿ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ಹಂತಕರ ರೇಖಾಚಿತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದರೆ ಆರೋಪಿಗಳ ಚಲನವಲನಗಳನ್ನು ಬೇಗ ಪತ್ತೆಹಚ್ಚಬಹುದು ಎಂಬುದು ಪೊಲೀಸರ ತಂತ್ರವಾಗಿದೆ.