ನವದೆಹಲಿ: ಅಯೋಧ್ಯೆಯ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಅಖಿಲಾ ಭಾರತ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಈಗಾಗಲೇ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಿದ್ದೇವೆ. ಅಲ್ಲದೇ ಅರ್ಜಿಯ ವಿಚಾರಣೆಗಳನ್ನು ಜನವರಿಯಲ್ಲಿ ಪರಿಶೀಲಿಸುತ್ತೇವೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಪೀಠ ನಿರಾಕರಿಸಿದೆ.
ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರಿದ್ದ ನ್ಯಾಯಪೀಠವು ಜನವರಿಯಲ್ಲಿ ವಿಚಾರಣೆ ನಡೆಸಲು ಸೂಕ್ತ ನ್ಯಾಯಪೀಠಕ್ಕೆ ಈಗಾಗಲೇ ಸೂಚಿಸಿದೆ ಎಂದು ಹೇಳಿತು.
ಭೂ ವಿವಾದದ ಶೀಘ್ರ ವಿಚಾರಣೆಗಾಗಿ ವಕೀಲ ಬರುಣ್ ಕುಮಾರ್ ಸಿನ್ಹಾ ಅವರ ಮೂಲಕ ಅಖಿಲ ಭಾರತ ಹಿಂದೂ ಮಹಾಸಭಾ ನ್ಯಾಯಪೀಠ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.