ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆದ ವಿವೇಕ ಜಯಂತಿ ಆಚರಣೆ; ಗುರುವಿನಿಂದ ಪಡೆದ ಉತ್ಕೃಷ್ಟ ವಿಚಾರಗಳ ಚೈತನ್ಯ ರೂಪ ಶಿಷ್ಯರು – ಡಾ. ಜಿ.ಬಿ ಹರೀಶ್.-ಕಹಳೆ ನ್ಯೂಸ್
ಪುತ್ತೂರು : ಶಿಷ್ಯರನ್ನು ಉತ್ತಮ ವಿಚಾರಗಳಿಂದ ರೂಪಿಸಬೇಕೆಂಬ ಹಂಬಲ ಗುರುವಿಗೆ ಇರುತ್ತದೆ. ಶಿಷ್ಯರಾದವರು ಸಮಾಜಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆ ಗುರುವಿನ ಆಧ್ಯಾತ್ಮಿಕ ಗರ್ಭದಿಂದ ಪ್ರಸೂತಿ ಆದಂತೆ. ರಾಮಕೃಷ್ಣ ಪರಮಹಂಸರ ನೆರಳಿನಲ್ಲಿ ವಿವೇಕಾನಂದರು ಜಗದಗಲ ಹೆಸರಾಗುವಂತೆ ಬೆಳೆದರು. ಸ್ವದೇಶಿಯತೆಯನ್ನು ಜಾಗೃತಗೊಳಿಸಿ ಎಲ್ಲರನ್ನೂ ಒಳಿತಿನತ್ತ ಸಾಗುವಂತೆ ಪ್ರೇರಣೆಯಾಗಿದ್ದವರು ವಿವೇಕಾನಂದರು. ಸದಾ ಭಾರತದ ಒಳಿತನ್ನು ಬಯಸುತ್ತಿದ್ದ ಸ್ವಾಮಿ ವಿವೇಕಾನಂದರು ಅವರ ಬಳಿ ಬಂದವರನ್ನು ದೇಶಭಕ್ತರನ್ನಾಗಿ ಪರಿವರ್ತನೆ ಮಾಡುತ್ತಿದ್ದರು. ಹಿಂದುತ್ವಕ್ಕೆ ಹೊಸ ದಿಕ್ಕು ಇವರಿಂದ ದೊರಕಿತು ಎಂದು ಬೆಂಗಳೂರಿನ ವಂದೇಮಾತರಂ ಪಾಠ ಶಾಲೆಯ ಸಂಸ್ಥಾಪಕ ಹಾಗೂ ಸಂಶೋಧಕ ಡಾ| ಜಿ.ಬಿ ಹರೀಶ್ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘಗಳ ಆಶ್ರಯದಲ್ಲಿ ಪ್ರಜ್ಞೆಯೊಂದಿಗೆ ಪ್ರಗತಿ, ವಿಕಸಿತ ಭಾರತಕ್ಕಾಗಿ ಎಂಬ ಪರಿಕಲ್ಪನೆಯೊಂದಿಗೆ ನಡೆದ ವಿವೇಕಾನಂದ ಜಯಂತಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ವಿವೇಕಾನಂದರು ಜಗತ್ತಿನ ಆಸ್ತಿ. ನಮ್ಮ ಪರಂಪರೆಯ ಬಗ್ಗೆ ಅರಿವು ಮೂಡಿಸಿದ ಪ್ರೇರಣದಾಯಿ. ಸಮಾಜದಲ್ಲಿ ಪರಿವರ್ತನೆ ಸಾಧಿಸುವತ್ತ ಯುವಶಕ್ತಿ ಮುಂದೆ ಹೆಜ್ಜೆಯನ್ನಿಡಬೇಕು. ನಮ್ಮ ದೇಶದ ಸ್ಪಷ್ಟ ಕಲ್ಪನೆ ಮತ್ತು ಆತ್ಮವಿಶ್ವಾಸದ ಗುಣ ಅವರಲ್ಲಿತ್ತು. ನಾವು ಸಮಾಜಕ್ಕಾಗಿ ಬದುಕಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ತಿಳಿಸಿಕೊಟ್ಟರು ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ವೆಬ್‌ಸೈಟ್ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಕಸಿತ ಭಾರತ ಪರಿಕಲ್ಪನೆಗೆ ಪೂರಕವಾಗಿ ಸಮಾಜಮುಖಿ ಹಾಗೂ ಹೊಸ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ತಯಾರಿಸಿದ ವಿವಿಧ ರೀತಿಯ ಪ್ರಾಜೆಕ್ಟ್ ಗಳ ಅನಾವರಣ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು. ವಿವೇಕಾನಂದ ಶಿಶುಮಂದಿರದ ವಿದ್ಯಾರ್ಥಿಗಳು ವಿವೇಕವಾಣಿಯನ್ನು ಪ್ರಸ್ತುತಪಡಿಸಿದರು.
ವಿವೇಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ಸಂಸ್ಥೆಗಳಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ
ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕರ‍್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೆಶಕರು, ಸದಸ್ಯರು, ಪ್ರಾಂಶುಪಾರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ
ಹಾಗೂ ವಿದ್ಯಾರ್ಥಿಗಳು ಸೇರಿ ಎಂಟು ಸಾವಿರ ಮಂದಿ ಭಾಗವಹಿಸಿದರು.
ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ
ಉಪನ್ಯಾಸಕಿ ಡಾ. ಶ್ರುತಿ ಕರ‍್ಯಕ್ರಮವನ್ನು ನಿರೂಪಿಸಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ| ಸುಧಾ ರಾವ್ ವಂದಿಸಿದರು.
ಬಾಕ್ಸ್
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಿಂದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಪತ್ರಿಕೋದ್ಯಮದಲ್ಲಿ ಇದೇ ಮೊದಲ
ಬಾರಿಗೆ ವಿಕಸನ ನ್ಯೂಸ್ ಬುಲೆಟಿನ್ ಮೂಲಕ ವಿದ್ಯಾರ್ಥಿಗಳು ಕರ‍್ಯಕ್ರಮದ ನೇರಪ್ರಸಾರವನ್ನು ಮಾಡಿದರು.