ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಸಂಸದ ಡಾ.ಕೆ ಸುಧಾಕರ್ – ಕಹಳೆ ನ್ಯೂಸ್
ಬೆಂಗಳೂರು: ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5ಲಕ್ಷವರೆಗಿನ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರಕಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಕೆ. ಸುಧಾಕರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ, ಹಿಂದುಳಿದವರ, ಬಡವರಪರ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದು ಜನಸಾಮಾನ್ಯರಿಗೆ 5 ಲಕ್ಷದವರೆಗಿನ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಪ್ರತಿಯೊಬ್ಬರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಿ ಎಂದರು.