ಪುತ್ತೂರು: ಹಿಂದೂ ಪವಿತ್ರ ಸ್ಥಾನ ಹೊಂದಿರುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಒತ್ತಾಯ ಈಗಾಗಲೇ ಇದೆ. ಆದರೆ, ಗೋವನ್ನು ‘ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವಂತೆ ಆಗ್ರಹಿಸಬೇಕಿದೆ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್ ಹೇಳಿದರು.
ಗೋವಿನ ಕೆಚ್ಚಲು ಕತ್ತರಿಸಿದ ಘಟನೆ ಖಂಡಿಸಿ ಪುತ್ತೂರು ಗೋ ಸಂರಕ್ಷಣಾ ಸಮಿತಿಯಿಂದ ಪುತ್ತೂರಿನಲ್ಲಿ ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆಯ ಬಳಿಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಹಿಂದೂಗಳ ತಾಳ್ಮೆಯ ಕಟ್ಟೆಯೊಡೆದಾಗ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ಹಿಂದೂ ವಿರೋಧಿಗಳಿಗೆ ಮತ್ತೆ ನೆನಪು ಮಾಡಬೇಕು. ಯಾವುದಕ್ಕೂ ಸಿದ್ಧವಿಲ್ಲದ ‘ಸಿದ್ದರಾಮಯ್ಯ’ ‘ಶುದ್ಧರಾಮಯ್ಯ’ ಆಗಬೇಕಾದರೆ ಗೋವು ಅನಿವಾರ್ಯ. ಸಿದ್ದರಾಮಯ್ಯ ಅವರು ಜೀವನದ ಮೋಕ್ಷಕ್ಕಾದರೂ ಒಳ್ಳೆಯ ಕೆಲಸ ಮಾಡಬೇಕು. ಇಂಥ ಕ್ರೌರ್ಯ ಬೆಂಬಲಿಸುವ ಪ್ರವೃತ್ತಿ ಮುಂದುವರಿದರೆ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಮಾತನಾಡಿದರು.
ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಪ್ರಮುಖರಾದ ಸಂಜೀವ ಮಠಂದೂರು, ದಯಾನಂದ ಶೆಟ್ಟಿ ಉಜಿರೆಮಾರು, ಶಿವ ಕುಮಾರ್, ಆರ್.ಸಿ.ನಾರಾಯಣ, ಪ್ರಸನ್ನ ಮಾರ್ತ, ಲೀಲಾವತಿ ನಾಯ್ಕ್, ಜೀವಂಧರ್ ಜೈನ್, ಸುಂದರ ಪೂಜಾರಿ ಬಡವು, ಯುವರಾಜ್ ಪೆರ್ವತೋಡಿ, ಸುರೇಶ್ ಆಳ್ವ, ಸಾಜ ರಾಧಾಕೃಷ್ಣ ಆಳ್ವ, ಉಮೇಶ್ ಕೊಡಿಯಡ್ಕ, ನಾಗೇಶ್ ಪ್ರಭು, ಚಂದ್ರಶೇಖರ ರಾವ್ ಬಪ್ಪಳಿಗೆ, ಅಪ್ಪಯ್ಯ ಮಣಿಯಾಣಿ, ರಾಜೇಶ್ ಬನ್ನೂರು, ಸುಜಿಂದ್ರ ಪ್ರಭು, ವಿದ್ಯಾಗೌರಿ, ಪುರುಷೋತ್ತಮ ಮುಂಗ್ಲಿಮನೆ, ಮುರಳಿಕೃಷ್ಣ ಹಸಂತಡ್ಕ, ಶಶಿಧರ್ ನಾಯಕ್, ಅನಿಲ್ ತೆಂಕಿಲ, ನಾಗೇಂದ್ರ ಬಾಳಿಗ, ವಿಶಾಖ್ ಸಸಿಹಿತ್ಲು ಭಾಗವಹಿಸಿದ್ದರು.
ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಗೋ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.