ಪುತ್ತೂರಿನಲ್ಲಿ ಹಿಂದೂ ಧರ್ಮಶಿಕ್ಷಣ – ಎರಡನೇ ಪೂರ್ವಭಾವಿ ಸಭೆ ; ಮುಂದಿನ ಯುಗಾದಿಯಂದು ತಾಲೂಕಿನ ಪ್ರತಿಗ್ರಾಮಗಳಲ್ಲಿ ಧಾರ್ಮಿಕ ಶಿಕ್ಷಣ ಜಾರಿ-ಕಹಳೆ ನ್ಯೂಸ್
ಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿದೇಶನದ ಮೇರೆಗೆ ಪುತ್ತೂರು ಹಾಗೂ ಸನಿಹದ ತಾಲೂಕುಗಳಾದ್ಯಂತ ಆರಂಭಿಸಲು ಉದ್ದೇಶಿಸಿರುವ ಹಿಂದೂ ಧರ್ಮ ಶಿಕ್ಷಣದ ಕುರಿತಾದ ಎರಡನೇ ಪೂರ್ವಭಾವಿ ಸಭೆ ಶನಿವಾರ ನಡೆಯಿತು.
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ನಟರಾಜ ವೇದಿಕೆಯ ಮುಂಭಾಗಗದಲ್ಲಿ ನಡೆದ ಈ ಸಭೆಗೆ ವಿವಿಧ ಸಮುದಾಯಗಳ ನೇತಾರರು, ರಾಜಕೀಯ, ಧಾರ್ಮಿಕ, ಸಾಮಾಜಿಕ ಧುರೀಣರು ಹಾಜರಾದರು.
ಈ ಸಂದರ್ಭದಲ್ಲಿ ಮಾತನಾಡಿದ, ಧರ್ಮಶಿಕ್ಷಣ ಜಾರಿಯಾಗಿ ನಿರಂತರ ಶ್ರಮಿಸುತ್ತಿರುವ ಸುಬ್ರಹ್ಮಣ್ಯ ನಟ್ಟೋಜ ಅವರು, ಶೃಂಗೇರಿ ಜಗದ್ಗುರುಗಳು ನಮಗೆಲ್ಲರಿಗೂ ವಿಶೇಷ ಜವಾಬ್ದಾರಿ ನೀಡಿದ್ದಾರೆ. ಈ ಹೊಣೆಗಾರಿಕೆಯನ್ನು ಒಂದಿನಿತೂ ಲೋಪವಿಲ್ಲದ ರೀತಿಯಲ್ಲಿ ನಿರ್ವಹಿಸಬೇಕಾಗಿದೆ. ತಾಲೂಕಿನಾದ್ಯಂತ ಮುಂಬರುವ ಯುಗಾದಿಯಂದು ಏಕಕಾಲಕ್ಕೆ ಧರ್ಮಶಿಕ್ಷಣ ಜಾರಿಗೊಳ್ಳಬೇಕಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲೂ ಗ್ರಾಮಸಮಿತಿ ಅಸ್ಥಿತ್ವಕ್ಕೆ ಬರಬೇಕಿದೆ. ಇದರ ಜವಾಬ್ದಾರಿಯನ್ನು ಆಯಾ ಗ್ರಾಮದವರು ನಿರ್ವಹಿಸಿದಾಗ ಕೆಲಸಕಾರ್ಯ ಸುಲಲಿತವಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಕೆಲವೊಂದು ಗ್ರಾಮಗಳಲ್ಲಿ ಗ್ರಾಮಸಮಿತಿಯ ರಚನಾ ಕಾರ್ಯಗಳು ನಡೆದಿವೆ. ಪ್ರತಿಯೊಂದು ಭಾಗಗಳಲ್ಲೂ ಈ ಕಾರ್ಯಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ಈ ಕೆಲಸ ಮೊದಲೇ ಆಗಬೇಕಿತ್ತೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಪ್ರತಿಯೊಬ್ಬರೂ ಯಾವುದೇ ರಾಜಕೀಯ, ವೈಯಕ್ತಿಕ ಸ್ವಾರ್ಥದ ಬಯಕೆಗಳಿಲ್ಲದೆ ಎಲ್ಲರೂ ಒಂದಾಗಿ ಹಿಂದೂ ಧರ್ಮಕ್ಕಾಗಿ ಕೈಜೋಡಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ಸಭೆಯನ್ನು ಜನವರಿ 26ರಂದು ಸಂಜೆ 4 ಗಂಟೆಗೆ ನಡೆಸುವುದೆಂದು ತೀರ್ಮಾನಿಸಲಾಯಿತು.