Recent Posts

Monday, January 27, 2025
ಸುದ್ದಿ

ಪ್ರಯಾಗ್‌ರಾಜ್‌ನಲ್ಲಿ ನಾಗಾಸಾಧುಗಳು ಮತ್ತು ಅಘೋರಿಗಳ ಭೇಟಿಯಾಗಿ ಆಧ್ಯಾತ್ಮಿಕತೆ ಬಗ್ಗೆ ಮಾಹಿತಿ ಪಡೆದ ಯು.ಟಿ.ಖಾದರ್‌-ಕಹಳೆ ನ್ಯೂಸ್

ಮಂಗಳೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಪಾಲ್ಗೊಂಡು ಸೌಹಾರ್ದ ಮೆರೆದಿದ್ದಾರೆ. ಅವರು ನದಿಗೆ ಇಳಿದು ಪವಿತ್ರ ನೀರನ್ನು ಚಿಮುಕಿಸಿಕೊಂಡರಲ್ಲದೆ, ದೋಣಿ ವಿಹಾರ ನಡೆಸಿ ಮಹಾಕುಂಭದ ಸೊಬಗನ್ನು ಸವಿದರು.

ಉತ್ತರ ಪ್ರದೇಶದ ಸ್ಪೀಕರ್‌ ಸತೀಶ್‌ ಮಹಾನಾ ಅವರ ಆಹ್ವಾನದ ಮೇರೆಗೆ ಕುಂಭಮೇಳದಲ್ಲಿ ಪಾಲ್ಗೊಂಡ ಖಾದರ್‌, ನಾಗಾಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅವರು ಅಲಹಾಬಾದ್‌ನಲ್ಲಿ ಹಜರತ್‌ ಮಖ್ದೂಮ್‌ ಸಾದತ್‌ ಚೌಧೋನ್‌ ಪೀರೋ(ರ.ಅ) ದರ್ಗಾ ಶರೀಫ್ಗೂ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಭಿನ್ನ ಸಂಸ್ಕೃತಿಯ ಪರಿಚಯ
ಸ್ಪೀಕರ್‌ ಸತೀಶ್‌ ಮಹಾನಾ ಅವರ ಆಹ್ವಾನದ ಮೇರೆಗೆ ನಾನು ಮತ್ತು ಮಿತ್ರರು ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದೇವೆ. ತುಂಬಾ ಖುಷಿಯಾಗಿದೆ. ಉತ್ತಮ ಅನುಭವ ಪಡೆದುಕೊಂಡೆ. ದೇಶದ ವಿವಿಧ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಅವಕಾಶ ಲಭಿಸಿತು. ಇದು ವಿಶ್ವಾಸಭರಿತ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಖಾದರ್‌ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೌಹಾರ್ದದ ಸಂಗಮ
ಮಹಾಕುಂಭಮೇಳದಲ್ಲಿ ಹಿಂದೂ ವೇತರರೂ ಇದ್ದರು. ಅಂತೆಯೇ ದರ್ಗಾದಲ್ಲಿ ಹಿಂದೂಗಳೂ ಇದ್ದರು. ಅಲ್ಲಿಯೂ ಧಾರ್ಮಿಕ ಸೌಹಾರ್ದ ಕಾಣಲು ಸಾಧ್ಯವಾಯಿತು ಎಂದು ಖಾದರ್‌ ತಿಳಿಸಿದ್ದಾರೆ.

ಮೂಡ್‌ಗೆ ತಕ್ಕಂತೆ ಪ್ರತಿಕ್ರಿಯೆ
ನಾಗಾಸಾಧುಗಳು, ಅಘೋರಿ ಗಳು, ಸ್ವಾಮೀಜಿಗಳು ಹಾಗೂ ಧಾರ್ಮಿಕ ಅನುಷ್ಠಾನದಲ್ಲಿ ತೊಡಗಿಕೊಂಡಿರುವವರ ಜತೆ ಮಾತನಾಡಲು ಪ್ರಯತ್ನಿಸಿದೆ. ಕೆಲವರು ಅವರ ಮೂಡ್‌ ತಕ್ಕಂತೆ ಪ್ರತಿಕ್ರಿಯಿಸುತ್ತಾರೆ. ಮತ್ತೆ ಕೆಲವರು ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಅನುಷ್ಠಾನ, ಶ್ರದ್ಧೆ. ಓರ್ವ ನಾಗಸಾಧು ಹಲವು ವರ್ಷಗಳಿಂದ ಕೈಯನ್ನು ಮೇಲಕ್ಕೆ ಎತ್ತಿಯೇ ಇರುವಂತಹ ಅನುಷ್ಠಾನ ಮಾಡುತ್ತಿರುವುದನ್ನು, ಇನ್ನೋರ್ವರು ಎರಡರಿಂದ ಮೂರು ವರ್ಷಗಳಿಂದ ನಿಂತುಕೊಂಡೇ ತನ್ನ ಆಚರಣೆ ಮಾಡುತ್ತಿರುವುದನ್ನು ತಿಳಿದುಕೊಂಡೆ ಎಂದು ಖಾದರ್‌ ತಿಳಿಸಿದ್ದಾರೆ.

ಉರೂಸ್‌ಗೆ ಆಹ್ವಾನ
ಕುಂಭಮೇಳಕ್ಕೆ ತನ್ನನ್ನು ಆಹ್ವಾನಿಸಿದ ಉತ್ತರ ಪ್ರದೇಶದ ಸ್ಪೀಕರನ್ನು ಮಂಗಳೂರಿನಲ್ಲಿ ನಡೆಯುವ ಉರೂಸ್‌ನಲ್ಲಿ ಭಾಗವಹಿಸಲು ಆಹ್ವಾನಿಸಿದ್ದೇನೆ. ಸಾಂಸ್ಕೃತಿಕವಾಗಿ ವೈವಿಧ್ಯವಾಗಿರುವ ನಮ್ಮ ದೇಶದಲ್ಲಿ ಇಂತಹ ಭೇಟಿ, ಸೌಹಾರ್ದ ಅಗತ್ಯ ಎಂದು ಖಾದರ್‌ ಹೇಳಿದ್ದಾರೆ.