ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ; ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂದೆ ಪ್ರತಿಭಟನೆ-ಕಹಳೆ ನ್ಯೂಸ್
ಹಾಸನ: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹಾಸನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಬ್ಬರು ಆರೋಪಿಸಿದ್ದು, ಈ ಆರೋಪ ಹಿಂಪಡೆಯುವಂತೆ ಆಗ್ರಹಿಸಿ ನಗರದ ಹೊರವಲಯ ಹೇಮಗಂಗೋತ್ರಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂದೆ ಅತಿಥಿ ಉಪನ್ಯಾಸಕರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಉಪನ್ಯಾಸಕರು, ವಿಶ್ವವಿದ್ಯಾಲಯದ ನಾಮನಿರ್ದೇಶಕ ಸಿಂಡಿಕೇಟ್ ಸದಸ್ಯರೊಬ್ಬರೂ ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದು, ಹಾಸನ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಕುಲಪತಿ ಮತ್ತು ಕುಲಸಚಿವರು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದರು.
ಟೆಂಡರ್ ಪ್ರಕ್ರಿಯೆಯಲ್ಲಿಯೂ ಭ್ರಷ್ಠಾಚಾರ ನಡೆಯುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ, ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ತಂದಿದ್ದು, ಅತಿಥಿ ಉಪನ್ಯಾಸಕರ ಗೌರವಕ್ಕೂ ಚ್ಯುತಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಯಾವುದೇ ಸಿಂಡಿಕೇಟ್ ಸದಸ್ಯರು, ವಿಶ್ವವಿದ್ಯಾಲಯ, ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಂಡಿಕೇಟ್ ಸದಸ್ಯರ ನೇಮಕವಾದಾಗ ನಮಗೆ ಹೆಚ್ಚು ಸಂತೋಷವಾಗಿತ್ತು. ಅವರಿಂದ ಉದ್ಯೋಗದ ಭದ್ರತೆ, ವೇತನ ಹೆಚ್ಚಳ ಆಗಲಿದೆ ಎನ್ನುವ ಆಶಾಭಾವದಲ್ಲಿ ನಾವು ಇದ್ದೇವು. ಆದರೆ ಅವರೇ ಈ ರೀತಿ ಹೇಳಿಕೆ ಕೊಟ್ಟಿರುವುದು ಆಶ್ಚರ್ಯವನ್ನು ಉಂಟು ಮಾಡಿದೆ. ವಿದ್ಯಾವಂತರಾಗಿ ಇಂತಹ ಹೇಳಿಕೆ ಕೊಡಬಾರದಿತ್ತು ಎಂದು ದೂರಿದರು.
ನಮ್ಮ ನೇಮಕಾತಿ ಮಾಡುವ ವೇಳೆ ಅಧಿಸೂಚನೆ ಹೊರಡಿಸಿ, ಕಾನೂನು ವ್ಯಾಪ್ತಿಯಲ್ಲಿ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆಯ್ಕೆ ಸಮಿತಿಯಿಂದಲೇ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಎಲ್ಲ ದಾಖಲೆ ಪರಿಶೀಲಿಸಿ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಪುಷ್ಪಾವತಿ, ಎಸ್.ಜೆ. ಮಹೇಶ್, ಅಶೋಕ್, ಮಹೇಶ್, ಪುಟ್ಟರಾಜಪ್ಪ, ಷಣ್ಮುಗ, ಪ್ರೇಮಕುಮಾರ್, ಅಮರ್ ಇತರರು ಭಾಗವಹಿಸಿದ್ದರು.