ಮಂಗಳೂರು: ಭಾರತವು ಡಿಜಿಟಲ್ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧಿಸಿದೆ, ಜೊತೆಗೆ ಅದರ ಉಪಯೋಗಗಳು ಹಲವು ಕ್ಷೇತ್ರಗಳಲ್ಲಿ ಜನಪ್ರಿಯವಾಗಿವೆ. ಆದರೆ ಅವಶ್ಯಕವಾಗಿರುವ ಭದ್ರತಾ ಕ್ರಮಗಳನ್ನು ಜನಸಾಮಾನ್ಯರು ತಿಳಿಯದಿರುವುದರಿಂದ ವಂಚನೆಗಳು ಮಿತಿಮೀರುತ್ತಿವೆ ಎಂದು ಎನ್.ಐ.ಟಿ.ಕೆ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ| ಆಲ್ವಿನ್ ರೋಶನ್ ಪಾಯಸ್ ಹೇಳಿದರು.
ಜನವರಿ 30 ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ಆಯ್ದ ಎಟಿಎಲ್ ಶಾಲೆಯಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಎನ್.ಐ.ಟಿ.ಕೆ ಸುರತ್ಕಲ್ ಸೈಬರ್ ಸೆಕ್ಯೂರಿಟಿ ರೀಸರ್ಚ್ ಲ್ಯಾಬ್ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ ಶಾಲಾ ಕಾಲೇಜುಗಳಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಕ್ರಿಪ್ಟೋಗ್ರಫಿü ಕಾರ್ಯಾಗಾರಗಳನ್ನು ಏರ್ಪಡಿಸಿ ಭದ್ರತೆಯ ಹಲವು ಮಜಲುಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಹಾಯಕ ಪ್ರೊಫೆಸರ್ ಡಾ| ಮಹೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಈ ಬಗ್ಗೆ ಮುಂದಿನ ವರ್ಷದಿಂದ ಸಂಸ್ಥೆಗಳಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೂಲಕ ಎಲ್ಲರನ್ನು ತಲುಪುವ ಹಾಗೂ ಸಂಬAಧಿತ ಆರ್ಥಿಕ ಅಪರಾಧಗಳನ್ನು ತಡೆಗಟ್ಟುವ ಪ್ರಯತ್ನ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಮಾತನಾಡಿ, ಎನ್.ಐ.ಟಿ.ಕೆ ಮತ್ತು ಭಾರತ ಸರ್ಕಾರದ ಈ ಯೋಜನೆಯು ಆರ್ಥಿಕ ಕ್ಷೇತ್ರದಲ್ಲಿ ಸೈಬರ್ ವಂಚಕರ ಹಾವಳಿಯನ್ನು ತಡೆಗಟ್ಟುವ ಒಂದು ಉತ್ತಮ ಪ್ರಯತ್ನ. ಡಿಜಿಟಲ್ ವಿಜ್ಞಾನ ತಂತ್ರಜ್ಞಾನವನ್ನು ವಿಪುಲವಾಗಿ ಅನುಸರಿಸುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿ ಭದ್ರತಾ ಕ್ರಮಗಳ ಬಗ್ಗೆ ಅಗತ್ಯ ಕ್ರಮ ಕೈಗೊಂಡಲ್ಲಿ ಆರ್ಥಿಕ ಅಪರಾಧಗಳನ್ನು ತಡೆಯಬಹುದು ಎಂದರು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ತಾಂತ್ರಿಕ ಕಾರ್ಯಕ್ರಮದಲ್ಲಿ ಡಾ| ಆಲ್ವಿನ್ ರೋಶನ್ ಪಾಯಸ್ ಹಾಗೂ ಡಾ| ಮಹೇಂದ್ರ ಪ್ರತಾಪ್ ಸಿಂಗ್ ಸೈಬರ್ ಭದ್ರತಾ ಕ್ರಮಗಳ ಬಗ್ಗೆ ಆಸಕ್ತಿದಾಯಕ ವಿವರಗಳನ್ನು ಚರ್ಚಿಸಿದರು. ಎನ್.ಐ.ಟಿ.ಕೆ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆಗಳು ನಡೆದವು. ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರ್ಯಾಗಾರದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕೇಂದ್ರದ ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಇನ್ನೊವೇಶನ್ ಹಬ್ನ ಮೆಂಟರ್ ಅಂಬಿಕಾ ಸ್ವಾಗತಿಸಿ, ಶೈಕ್ಷಣಿಕ ಸಹಾಯಕಿ ರಶ್ಮಿ ವಂದಿಸಿದರು.