ಕಾಸರಗೋಡು: ಎಲ್ಲವೂ ಕಲಬೆರಕೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶುದ್ಧ ಭಸ್ಮ ತಯಾರಿಗಾಗಿ ಸನಾತನ ಮಾದರಿಯನ್ನು ಅನುಸರಿಸುತ್ತಿರುವ ಕಾರ್ಯವೊಂದು ನಡೆಯುತ್ತಿದೆ. ದೇಸಿ ದನದ ಸಗಣಿಯಿಂದ ಬೆರಣಿ ತಟ್ಟಿ, ನಿಗದಿತ ದಿನಗಳಲ್ಲಿ ಅದನ್ನು ಸುಟ್ಟು ತಯಾರಿಸುವ ಭಸ್ಮ ಪ್ರಾಕೃತಿಕವಾಗಿರುತ್ತದೆ ಎಂಬುದನ್ನು ಇಲ್ಲಿ ಸಾರಲಾಗಿದೆ.
ಏತಡ್ಕ ಸದಾಶಿವ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಶಿವಾರ್ಪಣಂ ಎಂಬ ಯೋಜನೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕರ್ತರು ದೇಸಿ ಗೋಮಯವನ್ನು ಸಂಗ್ರಹಿಸಿ ಬೆರಣಿ ತಟ್ಟಿ ನೀಡಿದ್ದರು. ಸೋಮ ಪ್ರದೋಷದಂದು ಇದಕ್ಕೆ ಅಗ್ನಿ ಸ್ಪರ್ಶ ಮಾಡಿ ಅಲ್ಲಿ ಲಭಿಸುವ ಭಸ್ಮವನ್ನು ದೇವಕಾರ್ಯಗಳಿಗೆ ಬಳಸಲಾಗುತ್ತಿದೆ.
‘ಹಿಂದೆ ಪ್ರತಿ ಮನೆಗಳಲ್ಲೂ ಶುದ್ಧಭಸ್ಮ ತಯಾರಿಸಲಾಗುತ್ತಿತ್ತು. ಅಂಥ ಪದ್ಧತಿಯನ್ನು ನೆನಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಕೌಶಲವನ್ನು ನಾಡಿಗೆ ಪರಿಚಯಿಸಲಾಗುತ್ತಿದೆ’ ಎಂದು ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪತ್ತಡ್ಕ ಗಣಪತಿ ಭಟ್ ತಿಳಿಸಿದರು.
ಅಗ್ನಿಸ್ಪರ್ಶ ಯೋಜನೆ ಪ್ರಕಾರ ಪತ್ತಡ್ಕ ಗಣಪತಿ ಭಟ್ ಅವರು ಅಗ್ನಿಸ್ಪರ್ಶ ನಡೆಸಿ ಚಟುವಟಿಕೆಗೆ ಚಾಲನೆ ನೀಡಿದರು. ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರ ರಾವ್ ಕಡೇಕಲ್ಲು, ಗಣರಾಜ ಕಡೇಕಲ್ಲು, ಚಂದ್ರಶೇಖರ ಏತಡ್ಕ, ವೈ.ವಿ.ಕೃಷ್ಣಮೂರ್ತಿ, ಕಿರಣಾ ಕೃಷ್ಣಮೂರ್ತಿ, ಅನ್ನಪೂರ್ಣೆಶ್ವರಿ ಏತಡ್ಕ, ರಾಜಗೋಪಾಲ ಬೇಳೇರಿ, ಶಂಕರ ರೈ ಕುಂಬತೊಟ್ಟಿ, ವಿಶ್ವನಾಥ ರೈ, ಕೃಷ್ಣ ರೈ, ಕುದುಂಬಾಯಿಮೂಲೆ ಶ್ರೀಧರ ಭಟ್, ವಿಷ್ಣು ಭಟ್ ಸಾಲೆತ್ತಡ್ಕ, ಶಾಂತಾ ಈಂದುಗುಳಿ, ಅಜಕ್ಕಳಮೂಲೆ ಶ್ರೀನಿವಾಸ ಭಟ್, ಕೋಟೆ ವಿಶ್ವೇಶ್ವರ ಭಟ್ ನೇತೃತ್ವ ವಹಿಸಿದ್ದರು.
ಪಳ್ಳತ್ತಡ್ಕ ವಲಯದ 263ನೇ ಪ್ರತಿರುದ್ರ ಪಾರಾಯಣ 21 ಮಂದಿ ರುದ್ರ ಪಾಠಕರಿಂದ ನಡೆಯಿತು.
ಕಾಸರಗೋಡಿನ ಏತಡ್ಕದಲ್ಲಿ ನಡೆದ ಶುದ್ಧ ಭಸ್ಮ ತಯಾರಿಯ ಪ್ರಕ್ರಿಯೆ
ಕಾಸರಗೋಡಿನ ಏತಡ್ಕದಲ್ಲಿ ಶುದ್ಧ ಭಸ್ಮ ತಯಾರಿಗಾಗಿ ದೇಸಿ ಗೋಮಯದಿಂದ ಸಿದ್ಧಪಡಿಸಲಾದ ಬೆರಣಿ.