ಪುತ್ತೂರು: ‘ಮಹಾಲಿಂಗೇಶ್ವರ ದೇವಳದ ಅಭವೃದ್ಧಿಗೆ ಸಂಬಂಧಿಸಿ ದೇವಳದ ಜಾಗದಲ್ಲಿರುವ ಕೆಲವು ಮನೆಗಳನ್ನು ತೆರವು ಮಾಡಲೇಬೇಕಾಗಿದೆ. ಈ ಬಗ್ಗೆ ಒಂದೆರಡು ಮನೆಯವರು ನಮಗೆ ಬೆದರಿಕೆ ಹಾಕಿದ್ದಾರೆ ಎನ್ನುತ್ತಿದ್ದಾರೆ. ಆದರೆ ನಾವು ಯಾರಿಗೂ ಬೆದರಿಕೆ ಹಾಕಿಲ್ಲ. ಒತ್ತಡ ಹೇರಿಲ್ಲ’ ಎಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ರಾಜಕಾಲುವೆಯ ಭಾಗದಲ್ಲಿ ₹ 2ಕೋಟಿ ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
‘ದೇವಳದ ಅಭಿವೃದ್ಧಿಗಾಗಿ ಸ್ವಇಚ್ಛೆಯಿಂದ ಮನೆ ತೆರವು ಮಾಡಿ ಎಂಬ ಬೇಡಿಕೆ ಮುಂದಿಟ್ಟಿದ್ದೇವೆ. ಎಲ್ಲ ಮನೆಯವರೊಂದಿಗೂ ಮಾತುಕತೆ ನಡೆಸಿಯೇ ನಾವು ಮುಂದುವರಿಯುತ್ತೇವೆ. ದೇವರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ದೇವಳದ ಜಾಗದಲ್ಲಿ ಅನಾದಿಕಾಲದಿಂದ ಬಾಡಿಗೆ ಆಧಾರದಲ್ಲಿ ಕೆಲವರು ಮನೆ ಮಾಡಿ ವಾಸ್ತವ್ಯವಿದ್ದಾರೆ. ಅಂಥ ಮನೆಗಳಲ್ಲಿ 5 ಮನೆಯವರು ಈಗಾಗಲೇ ಮನೆ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ ಆರ್ಥಿಕ ಸಂಕಷ್ಟವಿರುವ ಮಂದಿಗೆ ನಾನು ಸ್ವಂತ ಆದಾಯದಿಂದ ಒಂದಷ್ಟು ಸಹಕಾರ ನೀಡಿದ್ದೇನೆ. ಇಲ್ಲಿ ಮನೆ ಹೊಂದಿದವರು ಬೇರೆ ಕಡೆಯೂ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಮೂರು ಮನೆ ಮಾಡಿಕೊಂಡು ಬಾಡಿಗೆ ನೀಡಿ ತಿಂಗಳ ಬಾಡಿಗೆ ಪಡೆಯುವವರೂ ಇದ್ದು, ಆರ್ಥಿಕವಾಗಿ ಬಲಿಷ್ಟರಾಗಿದ್ದಾರೆ. ಅಂಥವರು ದೇವಳಕ್ಕೆ ಬೇಕಾಗಿ ಮನೆ ತೆರವು ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು. ಇದು ಸಾಧ್ಯವಿಲ್ಲದೆ ಇದ್ದರೆ ಕಾನೂನು ಹೋರಾಟ ಅನಿವಾರ್ಯವಾಗುತ್ತದೆ’ ಎಂದರು.
‘ದೇವಳದ ಜಾಗದಲ್ಲಿ ಮೂರು ಮೂರು ಮನೆ ಕಟ್ಟಿ ಬಾಡಿಗೆ ಕೊಟ್ಟು ದುಡ್ಡು ಮಾಡುವ ಕೆಲಸ ಸರಿಯಲ್ಲ ಎಂಬುದು ಸಮಾಜದ ಜನರ ಅಭಿಪ್ರಾಯ. ದೇವಳದ ಅಭಿವೃದ್ಧಿಗೆ ಬೇಕಾದ ಸ್ಥಳದಲ್ಲಿರುವ ಮನೆಗಳನ್ನು ಮಾತ್ರ ಪ್ರಸ್ತುತ ತೆರವಿಗೆ ಮನವೊಳಿಸುತ್ತಿದ್ದೇವೆ. ಮಹಾಲಿಂಗೇಶ್ವರ ಕ್ಷೇತ್ರವನ್ನು ಧರ್ಮಸ್ಥಳ, ಸುಬ್ರಹ್ಮಣ್ಯದಂತೆ ಪ್ರವಾಸಿಗರನ್ನು ಆಕರ್ಷಿಸುವ ಕ್ಷೇತ್ರವಾಗಿಸುವ, ಪ್ರವಾಸಿಗರನ್ನು ಸೆಳೆಯುವ ತಾಣವನ್ನಾಗಿಸುವ ಪ್ರಯತ್ನ ನಮ್ಮದಾಗಿದೆ’ ಎಂದು ಅವರು ಹೇಳಿದರು.
ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿ, ಮನೆಗಳನ್ನು ಸ್ವ ಇಚ್ಛೆಯಿಂದ ತೆರವುಗೊಳಿಸಿದ ರೂಪಾ, ಜಗದೀಶ್, ನಾರಾಯಣ ಶಗ್ರಿತ್ತಾಯ, ಉಮಾ, ವಿಶ್ವನಾಥ ಅವರನ್ನು ಶಾಸಕ ಅಭಿನಂದಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ದಿನೇಶ್ ಪಿ.ವಿ., ಸುಭಾಷ್ ರೈ ಬೆಳ್ಳಿಪ್ಪಾಡಿ, ನಳಿನಿ ಶೆಟ್ಟಿ, ವಿನಯ ಸುವರ್ಣ, ಪೂಡಾ ಸದಸ್ಯ ನಿಹಾಲ್ ರೈ, ದೇವಳದ ವ್ಯವಸ್ಥಾಪಕ ಹರೀಶ್ ಶೆಟ್ಟಿ ಭಾಗವಹಿಸಿದ್ದರು.
‘ನಾವು ಆರ್‌ಎಸ್‌ಎಸ್‌ನವರಿಗೆ, ವಿಶ್ವಹಿಂದೂ ಪರಿಷತ್‌ನವರಿಗೆ, ಬಜರಂಗದಳದವರಿಗೆ ದೂರು ಕೊಟ್ಟಿದ್ದೇವೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದು ಧರ್ಮಕ್ಕೆ ಶೋಭೆ ತರುವ ವಿಚಾರವಲ್ಲ, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ನಾವೇ ದೇವಳದ ಅಭಿವೃದ್ಧಿ ಮಾಡುತ್ತಿದ್ದು, ಸಹಕಾರ ಕೊಡಿ ಎಂದು ಕೇಳುತ್ತಿದ್ದೇವೆ. ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ, ಮನೆ ಇಲ್ಲದಿದ್ದವರಿಗೆ 3 ಸೆಂಟ್ಸ್ ಜಾಗ ನೀಡಿ ಮನೆ ನಿರ್ಮಿಸಿಕೊಡುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದು ಅವರು ತಿಳಿಸಿದರು.