ಕೊಡಗು, [ನ.13]: ಟಿಪ್ಪು ಜಯಂತಿ ಆಚರಣೆ ಸಂಬಂಧ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದಲ್ಲಿ ಭಯೋತ್ಪಾದನೆಯ ಮನಸ್ಥಿತಿಯನ್ನು ಟೀಕಿಸಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನ ನಿನ್ನೆ ರಾತ್ರಿ [ಸೋಮವಾರ] ಬಂಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಬಂಧಿಸಿದಂತೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ನ್ಯಾಯಾಲಯ ಇಂದು [ಮಂಗಳವಾರ] ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಅವಹೇಳನಕಾರಿ ಭಾಷಣ ಮಾಡಿದ್ದಾರೆಂದು ಸಿದ್ದಾಪುರದ ಅಸ್ಕರ್ ಎಂಬುವವರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಡಿ ಸಂತೋಷ್ ನನ್ನು ತುಮಕೂರಿನಲ್ಲಿ ಬಂಧಿಸಿ ಕೊಡಗಿಗೆ ಕರೆತಂದು ಮಂಗಳವಾರ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು.
ಬಳಿಕ ಅರ್ಧ ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ ಕೋರ್ಟ್ 2 ಬಾರಿ ತೀರ್ಪು ಕಾಯ್ದಿಸಿತ್ತು. ಅಂತಿಮವಾಗಿ ನ್ಯಾಯಾದೀಶರಾದ ಮೋಹನ್ ಗೌಡ ಅವರು ಸಂತೋಷ್ ತಮ್ಮಯ್ಯಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದರು.
ಪತ್ರಕರ್ತ, ಅಂಕಣಕಾರ ಹಾಗೂ ವಿಚಾರವಾದಿ ಸಂತೋಷ್ ತಮ್ಮಯ್ಯ ತಮ್ಮ ‘ಉಘೇ ವೀರಭೂಮಿಗೆ’ ಎಂಬ ಅಂಕಣದಲ್ಲಿ ’ಹೊರುತ್ತೇವೆ ಮೊಕದ್ದಮೆ ಉತ್ತರ ಸಿಗುವ ತನಕ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು.
ಈ ಲೇಖನದಲ್ಲಿ ಟಿಪ್ಪು ಜಯಂತಿ ವಿರುದ್ಧವಾಗಿ ಬರೆದಿದ್ದು, ಜಯಂತಿ ಆಚರಣೆ ಮಾಡುವುದು ಯಾಕೆ ಸರಿಯಲ್ಲ ಎಂದು ವಿಮರ್ಶಿಸಿದ್ದರು.
ಅಲ್ಲದೇ ನವೆಂಬರ್ 5ರಂದು ಗೋಣಿಕೊಪ್ಪದ ಕಾರ್ಯಕ್ರಮದಲ್ಲಿ ನಡೆದಿದ್ದ ಟಿಪ್ಪು ಕರಾಳ ಮುಖಗಳ ಅನಾವರಣ ಕಾರ್ಯಕ್ರಮದಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇಲೆ ಬಂಧಿಸಲಾಗಿತ್ತು
ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ದಾಖಲಿಸಿ ಬಂಧಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. Gn