ನವದೆಹಲಿ: ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಫೆ.13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಜನೆಯ ಪ್ರಕಾರ, ಮೋದಿ ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ. ಫೆ.13 ರಂದು ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಟ್ರಂಪ್ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
ಆದರೆ, ಮೋದಿಯವರ ಭೇಟಿಯ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಕಳೆದ ವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಮೆರಿಕದೊಂದಿಗೆ ಪ್ರಧಾನಿ ಮೋದಿಯವರ ಭೇಟಿಗಾಗಿ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಫೆ. 10, 11 ರಂದು ನಡೆಯಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದಾರೆ.