ಗುಣಮಟ್ಟದ ಆರೋಗ್ಯ ಮತ್ತು ನಿಸ್ಪ್ರಹ ಸೇವೆ ಬೆನಕ ಆಸ್ಪತ್ರೆಯ ಬೆಳವಣಿಗೆಗೆ ನಾಂದಿ-ಕಹಳೆ ನ್ಯೂಸ್
ಉಜಿರೆ: ಬೆನಕ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಯ ಗುಣಮಟ್ಟದ ನಿಸ್ಪ್ರಹ ಹಾಗೂ ನಗುಮೊಗದ ಸೇವೆಯಿಂದಾಗಿ ಜನರ ಆಯ್ಕೆಯ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಸಮಾಜಕ್ಕೆ ಒಳಿತನ್ನು ಮಾಡಬೇಕು ಎಂಬ ಸೇವಾಮನೋಭಾವ ಬೆನಕ ಸಂಸ್ಥೆಯ ಬೆಳವಣಿಗೆಯ ಹಿಂದಿನ ಧೀಶಕ್ತಿ ಹಾಗೂ ಅನನ್ಯತೆ. ನಗರಗಳಿಗೆ ಸೀಮಿತವಾದ ಅತ್ಯಾಧುನಿಕ ಸಲಕರಣೆಗಳು, ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಪರಿಣಿತ ವೈದ್ಯರ ಸೇವೆ ಬೆನಕ ಆಸ್ಪತ್ರೆಯಲ್ಲಿ ಲಭ್ಯವಿರುವುದು ಈ ಭಾಗದ ಜನತೆಯ ಸೌಭಾಗ್ಯ. ಬೆನಕ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿಕೊಂಡು ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಜನಸೇವೆಗೆ ಮತ್ತಷ್ಟು ಹತ್ತಿರವಾಗಿಬಿಟ್ಟಿದೆ ಎಂದು ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಮಹಾಮಂಡಲೇಶ್ವರರಾಗಿ ಪಟ್ಟಾಭಿಶಿಕ್ತರಾದ 1008 ಮಹಾಮಂಡಲೇಶ್ವರ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ರಜತ ಸಂಬ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಬರಮಾಡಿಕೊಂಡು ಗೌರವಾರ್ಪಣೆ ಸಲ್ಲಿಸಿದ ಸಂದರ್ಭದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡುತ್ತಿದ್ದರು.
ಬೆನಕ ಆಸ್ಪತ್ರೆಯ ಪರವಾಗಿ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ, ಮತ್ತು ಡಾ.ಆದಿತ್ಯ ರಾವ್. ಡಾ. ಅಂಕಿತಾ ಜಿ.ಭಟ್, ಡಾ.ರೋಹಿತ್ ಜಿ.ಭಟ್ ಹಾಗೂ ಸಿಬ್ಬಂದಿಯವರು ಗೌರವಾರ್ಪಣೆ ಸಲ್ಲಿಸಿದರು.
ಡಾ.ಗೋಪಾಲಕೃಷ್ಣ ಅವರು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಅಭಿನಂದಿಸಿ ಮಾತನಾಡುತ್ತಾ ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪಟ್ಟಾಧೀಶರಾದುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಬೆನಕ ಆಸ್ಪತ್ರೆಗೆ ಕನ್ಯಾಡಿ ಶ್ರೀಗಳು ಆಗಮಿಸಿದ್ದು ನಮ್ಮೆಲ್ಲರ ಸೌಭಾಗ್ಯ ಹಾಗೂ ಸಾರ್ಥಕ್ಯದ ಕ್ಷಣ ಎಂದು ತಿಳಿಸಿದರು.
ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಈ ಕಾರ್ಯಕ್ರಮನ್ನು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ನಿರ್ವಹಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ವಂದಿಸಿದರು.