![](https://www.kahalenews.com/wp-content/uploads/2025/02/b0ed29e8ea2bf557eaa0b6180d43ee1ea09c72b33502b15187a316afeabf641e.jpg)
ಪುತ್ತೂರು: ಏಕ ವ್ಯಕ್ತಿ ಸಾಗಾಟ ಮಾಡುವಂತಹ ಮತ್ತು ಮೆಷಿನ್ ಗನ್ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಹೊಂದಿರುವ ಡ್ರೋನ್ ಅನ್ನು ಪುತ್ತೂರಿನ ಯುವಕ ಆವಿಷ್ಕರಿಸಿ ಭಾರತೀಯ ಸೇನೆಗೆ ನೀಡಿದ್ದಾರೆ.
ಸ್ಥಿರತೆ, ನಿಖರತೆಯ ಈ ವಿಶಿಷ್ಟ, ಅತ್ಯಾಧುನಿಕ ಡ್ರೋನ್ ತಯಾರಿಸಿದವರು ಪುತ್ತೂರು ತಾಲೂಕಿನ ತಿಂಗಳಾಡಿ ಕಜೆಮಾರು ನಿವಾಸಿ ಕೊನಾರ್ಕ್ ರೈ.
ಸೈನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಶಸ್ತ್ರಸಜ್ಜಿತ ಡ್ರೋನ್ ಭಯೋತ್ಪಾದನೆ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. “ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಗಮನದಲ್ಲಿಟು ಕೊಂಡು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಡ್ರೋನ್ ಮೂಲಕ ಶಸ್ತ್ರ ಸಾಗಾಟ ನಡೆಸಲಾಗುತ್ತದೆ. ಡ್ರೋನ್ ಅತ್ಯಧಿಕ ಸಾಮರ್ಥ್ಯದ 9 ಎಂಎಂ “ಅಸ್ಮಿ’ ಮೆಷಿನ್ ಗನ್ ಅಳವಡಿಸ ಬಹುದಾಗಿದ್ದು, ಇದು ನಿಖರ ಗುರಿಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ವಿಶೇಷತೆ ಯನ್ನು ಹೊಂದಿದೆ.
2025ರ ಜ. 26 ಮತ್ತು 27ರಂದು ನಡೆದ ಪರೀಕ್ಷಾರ್ಥ ಪ್ರದರ್ಶನದಲ್ಲಿ ಡ್ರೋನ್ ಪ್ಲಾಟ್‌ಫಾರ್ಮ್ ನಲ್ಲಿ ಅಸ್ಮಿ ಮೆಷಿನ್ ಗನ್ ತಡೆರಹಿತ ಸ್ಥಿರತೆಯೊಂದಿಗೆ ಗುಂಡು ಹಾರಾಟ ಪ್ರದರ್ಶಿಸಿತು. ಡ್ರೋನ್ ಹಾರಾಟದಲ್ಲಿರುವಾಗ ನಿಖರವಾದ ಗುರಿಯನ್ನು ಸಾಧಿಸಿತು. ಡ್ರೋನ್ ಗಾಳಿಯಲ್ಲಿ ನೇರವಾದ ಗುರಿಯನ್ನು ತಲುಪಿ ಯಶಸ್ವಿ ಪ್ರದರ್ಶನ ನೀಡಿತು. ಜತೆಗೆ ನೆಲದ ಮೇಲೆ ಮತ್ತು ಗಾಳಿಯ ಮಧ್ಯದಲ್ಲಿ ಸ್ಥಿರವಾದ ಹಾರಾಟದ ಉದ್ದಕ್ಕೂ ಹೆಚ್ಚಿನ ಮಟ್ಟದ ಸ್ಥಿರತೆ ಮತ್ತು ನಿಖರತೆಯನ್ನು ನಿರ್ವಹಿಸಿತು. 45ರಿಂದ 60 ನಿಮಿಷಗಳ ಕಾಲ 15ರಿಂದ 30 ಕಿ.ಮೀ. ದೂರದವರೆಗೆ ಹಾರಾಟ ನಡೆಸಿತು. ಕಾಶ್ಮೀರದಲ್ಲಿ ನಡೆಯಲಿರುವ ರಾಷ್ಟ್ರೀಯ ರೈಫಲ್ಸ್ ವಿಭಾಗದ ಜತೆ ಇದರ ಪ್ರದರ್ಶನ-ಪರೀಕ್ಷೆ ನಡೆಯಲಿದೆ.
ಪುತ್ತೂರಿನ ತಿಂಗಳಾಡಿ ಕಜೆಮಾರು ನಿವಾಸಿ ಕೋನಾರ್ಕ್ ರೈ “ಕ್ಯಾಂಪ್ಕೋ’ದ ಆಡಳಿತ ನಿರ್ದೇಶಕರಾಗಿದ್ದ ಕೆ. ಪ್ರಮೋದ್ ಕುಮಾರ್ ರೈ ಮತ್ತು ಶೋಭಾ ರೈ ದಂಪತಿಯ ಪುತ್ರ. ಕೋನಾರ್ಕ್ ರೈ ಅವರು ಗುಜರಾತಿನ ಗಾಂಧಿನಗರದಲ್ಲಿ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದ್ದು ಅದರ ಮೂಲಕವೇ ಡ್ರೋನ್ ತಯಾರಿ ನಡೆದಿದೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ಸಂದರ್ಭ ಇದರ ಬಳಕೆ ಬಹಳಷ್ಟು ಪ್ರಯೋ ಜನಕಾರಿಯಾಗಲಿದೆ. ನಾನು ಆತ್ಮನಿರ್ಭರ್ ಭಾರತಕ್ಕಾಗಿ ಮಾತ್ರವಲ್ಲದೆ “ಆತ್ಮರಕ್ಷಿತ್ ಭಾರತ್’ಗಾಗಿ ಕಾರ್ಯತತ್ಪರನಾಗಿದ್ದೇನೆ ಎನ್ನುತ್ತಾರೆ ಕೋನಾರ್ಕ್ ರೈ ಕಜೆಮಾರು.