ಲಂಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ನಲ್ಲಿ ದಾಖಲಾದ “ಸುಧೀಂದ್ರ ತೀರ್ಥ ಶತನಮನ – ಶತಸ್ಮರಣ”-ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/YOG02529-scaled.jpg)
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ, ಕಾಶೀಮಠ ಗುರುಪರಂಪರೆಯ 20ನೇ ಯತಿ, ಮಹಾನ್ ಯೋಗಿ, ಮಾತನಾಡುವ ದೇವರೆಂದೇ ಭಕ್ತರು ನಂಬಿಕೊಂಡ ಬಂದಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ವಿಶಿಷ್ಟ ಕಾರ್ಯಕ್ರಮ ಲಂಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜಿಎಸ್ ಬಿ ಸಮಾಜದ ನೂರು ಜನ ಗಾಯಕ, ಗಾಯಕಿಯರು ಹಾಗೂ 25 ರಷ್ಟು ಹಿನ್ನಲೆ ವಾದ್ಯಗೋಷ್ಟಿ ಕಲಾವಿದರು. ಏಕ ಬೃಹತ್ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ನೀಡುವ ಮೂಲಕ ಜಿಎಸ್ ಬಿ ಇತಿಹಾಸದ ಸುವರ್ಣ ಅಧ್ಯಾಯಕ್ಕೆ ಸಾಕ್ಷಿಯಾದರು. ಮಂಗಳೂರು ರಥಬೀದಿಯಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕ್, ಶಂಕರ್ ಶ್ಯಾನುಭೋಗ್, ಪುತ್ತೂರು ಪಾಂಡುರಂಗ ನಾಯಕ್, ಬಾಲಚಂದ್ರ ಪ್ರಭು, ರಘುನಂದನ್ ಭಟ್, ಪ್ರಿಯಾ ಪೈ, ಮಹಾಲಕ್ಷ್ಮಿ ಶೆಣೈ ಸಹಿತ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ ನೂರು ಜನ ಗಾಯಕ, ಗಾಯಕಿಯರು ಏಕಕಂಠದಲ್ಲಿ ಹತ್ತು ಭಜನಾ ಹಾಡುಗಳನ್ನು ಹಾಡಿದರು. ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದ ಒಟ್ಟು ಕಲ್ಪನೆ ಮತ್ತು ರೂಪುರೇಶೆಯ ಜವಾಬ್ದಾರಿಯನ್ನು ಯೂತ್ ಆಫ್ ಜಿಎಸ್ ಬಿ ವಾಹಿನಿ ವಹಿಸಿತ್ತು. ಜನವರಿ 26 ರಂದು ಸಂಜೆ 6 ಗಂಟೆಗೆ ಆರಂಭವಾದ ಶತನಮನ – ಶತಸ್ಮರಣ ಕಾರ್ಯಕ್ರಮದಲ್ಲಿ ಪ್ರತಿ ಹಾಡಿನ ಮೊದಲು ಅದರ ಸಾಹಿತ್ಯ, ಸಂಗೀತ, ಹಿನ್ನಲೆ, ಮಹತ್ವ ಮತ್ತು ಸೂಕ್ಷ್ಮಾರ್ಥವನ್ನು ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಅವರ ವಿವರಿಸುವ ಮೂಲಕ ಜನರಿಗೆ ಹಾಡಿನ ವಿಶೇಷಗಳನ್ನು ಪರಿಚಯಿಸಿದರು. ಸುಮಾರು 8000 ದಷ್ಟು ಜನರು ಪ್ರತ್ಯಕ್ಷವಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರೆ ದೇಶ, ವಿದೇಶದ ಲಕ್ಷಾಂತರ ಜನ ನೇರಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಿದರು.
ಈ ಕಾರ್ಯಕ್ರಮಕ್ಕಾಗಿ ಮೂರು ತಿಂಗಳುಗಳಿಂದ ತಯಾರಿ ನಡೆಸಲಾಗಿತ್ತು. ಆನ್ ಲೈನ್ ಮೂಲಕ ಗಾಯಕ, ಗಾಯಕಿ, ವಾದ್ಯ ಕಲಾವಿದರು ತಮ್ಮ ಹೆಸರನ್ನು ನೊಂದಾಯಿಸಿದ್ದರು. ಅವರಿಗೆ ಏಳು ಹಾಡುಗಳನ್ನು ಮೊದಲೇ ಕಳುಹಿಸಿಕೊಡಲಾಗಿತ್ತು. ಉಳಿದ ಮೂರು ಹಾಡುಗಳನ್ನು ಕಾರ್ಯಕ್ರಮದ ಮುಂಚಿತವಾಗಿ ತಿಳಿಸಲಾಗಿತ್ತು. ಎಲ್ಲಾ ಕಲಾವಿದರಿಗೆ ಸಮವಸ್ತ್ರವನ್ನು ಒದಗಿಸಲಾಗಿತ್ತು. ಹಿಂದಿನ ದಿನ ಮಂಗಳೂರಿನ ರಮಣ್ ಪೈ ಸಭಾಂಗಣದಲ್ಲಿ ಪೂರ್ವಾಭ್ಯಾಸವನ್ನು ನಡೆಸಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಸೆಂಚೂರಿ ಬಿಲ್ಡರ್ಸ್ ಮುಖ್ಯಸ್ಥರಾದ ಡಾ. ದಯಾನಂದ ಪೈ, ಸತೀಶ್ ಪೈ, ಹ್ಯಾಂಗ್ಯೋ ಐಸ್ ಕ್ರೀಂ ಮಾಲೀಕರಾದ ಪ್ರದೀಪ್ ಜಿ ಪೈ, ಸಂವಿಟಿ ಕ್ಯಾಪಿಟಲ್ ನ ಅತುಲ್ ಕುಡ್ವ, ಜಯಲಕ್ಷ್ಮಿ ಸಿಲ್ಕ್ಸ್ ಉಡುಪಿ ಹಾಗೂ ಮಂಗಳೂರು ಗಣೇಶ್ ಬೀಡಿ ಪ್ರೈವೇಟ್ ಲಿಮಿಟೆಡ್ ನ ಪ್ರಮುಖರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.