ನುಡಿಸಿರಿಯ ಸಂಭ್ರಮಕ್ಕೆ ಇನ್ನು ಒಂದೇ ದಿನ ; ಆಳ್ವಾಸ್ ನಲ್ಲಿ ಮೇಳೈಸಲಿದೆ ಸಾಹಿತ್ಯ ಸಂಸ್ಕೃತಿಗಳ ರಸದೌತಣ – ಕಹಳೆ ನ್ಯೂಸ್
ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ’ಆಳ್ವಾಸ್ ನುಡಿಸಿರಿ’ಯು ತನ್ನ ಹದಿನೈದನೇ ವರ್ಷದ ಸಮ್ಮೇಳನವನ್ನು ನ. ತಿಂಗಳ ೧೬, ೧೭ ಮತ್ತು ೧೮ರಂದು ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಿದೆ.
ನ. ೧೬ ಶುಕ್ರವಾರ ಬೆಳಿಗ್ಗೆ ಸಮ್ಮೇಳನವು ಉದ್ಘಾಟನೆಗೊಳ್ಳಲಿದ್ದು, ನ. ೧೮ರಂದು ಸಮ್ಮೇಳನವು ಸಂಪನ್ನಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ಶೀಘ್ರವಾಗಿ ಅಂತಿಮ ಸ್ಪರ್ಷ ನೀಡಲಾಗುವುದು. ಅರ್ಥವತ್ತಾಗುವಂತೆ ಹಾಗೂ ಆಕರ್ಷಕವಾಗುವಂತೆ ಸಮ್ಮೇಳನವನ್ನು ಆಯೋಜಿಸಲು ಪೂರ್ವತಯಾರಿಗಳು ನಡೆಯುತ್ತಿವೆ. ಎಂದಿನಂತೆ ಈ ವರ್ಷವೂ ರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ಸಮ್ಮೇಳನವು ಜರಗಲಿದೆ.
ಕನ್ನಡ ನಾಡು, ಕನ್ನಡ ನುಡಿಯ ಕುರಿತಾದ ಎಚ್ಚರ, ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಈ ಸಮ್ಮೇಳನವು ಕನ್ನಡದ ಒಳಿತಿಗಾಗಿ ದುಡಿಸಬೇಕಾದ ಎಲ್ಲಾ ಆಯಾಮಗಳನ್ನು ದುಡಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಆದುದರಿಂದಲೇ ಈ ಸಮ್ಮೇಳನವು ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಾಗಿರದೆ ಕನ್ನಡದ ವಿರಾಟ್ ಸ್ವರೂಪದ ಅಭಿವ್ಯಕ್ತಿಯಾಗಿ ಜನಮನದ ಗಮನಸೆಳೆಯುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಆಳ್ವಾಸ್ ನುಡಿಸಿರಿಯು ಪ್ರಧಾನ ಪರಿಕಲ್ಪನೆಯೊಂದನ್ನು ಮುಂದಿಟ್ಟುಕೊಂಡು ಸಮ್ಮೇಳನವನ್ನು ಆಯೋಜಿಸಿಕೊಂಡಿದೆ. ಕರ್ನಾಟಕದ ಲಿಖಿತ ಹಾಗೂ ಮೌಖಿಕ ಇತಿಹಾಸಗಳನ್ನು ಅವಲೋಕಿಸುವಾಗ ಕರ್ನಾಟಕತ್ವವನ್ನು ರೂಪಿಸಿದ ವೈವಿಧ್ಯಮಯ ಕಾಣ್ಕೆಗಳು, ಐತಿಹ್ಯಗಳು, ಚರಿತ್ರೆ, ತಾತ್ವಿಕತೆ ಮುಂತಾದವು ಅಗಾಧವಾಗಿ ನಮ್ಮನ್ನು ಸೆಳೆಯುತ್ತವೆ.
ಸಾಮಾನ್ಯವಾಗಿ ಸಾಹಿತ್ಯ ಸಮ್ಮೆÃಳನಗಳು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿದ್ದರೆ, ಆಳ್ವಾಸ್ ನುಡಿಸಿರಿ ಅದಕ್ಕಿಂತ ಭಿನ್ನವಾಗಿದೆ. ಸಾಹಿತ್ಯದೊಂದಿಗೆ ಕೃಷಿಸಿರಿ, ವಿದ್ಯಾರ್ಥಿಸಿರಿ, ಚಲನಚಿತ್ರಸಿರಿ, ವಿಜ್ಞಾನಸಿರಿ, ಚಿತ್ರಸಿರಿ, ಛಾಯಾಚಿತ್ರಸಿರಿ, ಮಿಳಿತಗೊಂಡು ಎಲ್ಲಾ ವಯೋಮಾನದವರನ್ನು, ವಿಭಿನ್ನ ಆಸಕ್ತಿಯುಳ್ಳವರನ್ನು ಸೆಳೆಯುವ ನಿಜಾರ್ಥದ ನುಡಿಸಿರಿಯಾಗಿದೆ.
https://youtu.be/IIgD9IE97Pc
ಇನ್ನು ಆಳ್ವಾಸ್ ನುಡಿಸಿರಿಯಲ್ಲಿ ಬೃಹತ್ ಪುಸ್ತಕ ಪ್ರದರ್ಶನ ನಡೆಯುತ್ತಿದ್ದು, ವಿವಿಧ ವಿವಿಗಳ ಪ್ರಸಾರಾಂಗಗಳು, ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಗಳು ಪುಸ್ತಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು ೧೦೦ಕ್ಕೂ ಅಧಿಕ ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ನಡೆಯಲಿದೆ.