ಸ್ಪಷ್ಟವಾದ ಗುರಿ,ಛಲ ಇದ್ದಲ್ಲಿ ಉಜ್ವಲ ಭವಿಷ್ಯ ವಿದ್ಯಾರ್ಥಿಗಳದ್ದಾಗುತ್ತದೆ : ಪ್ರೊ. ವಂದನಾ ಶಂಕರ್-ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/Deepa-Pradana-2025-4.jpg)
ಪುತ್ತೂರು: “ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಈ ಎರಡು ವರ್ಷಗಳು ಮಹತ್ತರವಾದ ಬದಲಾವಣೆಗಳನ್ನು ಹೊಂದಬಲ್ಲ ಸಮಯ. ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ, ತಮ್ಮ ಪೋಷಕರ ಹಾಗೂ ಅಧ್ಯಾಪಕರ ನಿರೀಕ್ಷೆಗೆ ತಕ್ಕಂತಹ ಫಲಿತಾಂಶವನ್ನು ಪಡೆಯುವ ಒತ್ತಡವಿರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ತಮ್ಮ ಗುರಿಯನ್ನು ತಲುಪಬೇಕು. ಪರೀಕ್ಷೆಯ ಸಂದರ್ಭದಲ್ಲಿ ಒತ್ತಡ, ಆತಂಕಗಳು ಸಹಜ. ಇವೆಲ್ಲವನ್ನೂ ಹಿಮ್ಮೆಟ್ಟಿಸಿ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಮಯ ನಿರ್ವಹಣೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದಲ್ಲಿ ಜೀವನದ ಯಾವುದೇ ಪರೀಕ್ಷೆಗಳನ್ನು ಸಲೀಸಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳು ಸಫಲರಾಗುವುದು ಖಂಡಿತ” ಎಂದು ಪ್ರೊ. ವಂದನಾ ಶಂಕರ್, ಮುಖ್ಯಸ್ಥರು, ಪ್ರವೇಶಾತಿ ಮತ್ತು ಉದ್ಯೋಗ ಘಟಕ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ, ಪುತ್ತೂರು ಇವರು ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಹರಿಣಾಕ್ಷಿ. ಜೆ. ಶೆಟ್ಟಿ , ಅಧ್ಯಕ್ಷರು, ಶಿಕ್ಷಕ ರಕ್ಷಕ ಸಂಘ, ವಿವೇಕಾನಂದ ಪದವಿಪೂರ್ವ ವಿದ್ಯಾಲಯ, ಪುತ್ತೂರು ಇವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಹಾಗೂ ಹಿರಿಯರಿಂದ ಸಿಗುವ ಮಹತ್ವಪೂರ್ಣ ಹಾಗೂ ಮೌಲ್ಯಾಧಾರಿತ ಮಾತುಗಳನ್ನು ಜೀವನದಲ್ಲಿ ಅಳವಡಿಸಿ ಸಫಲತೆಯ ಮಾರ್ಗವನ್ನು ಕಂಡುಕೊಳ್ಳಬೇಕು. ಪ್ರಥಮ ಹಾಗೂ ದ್ವಿತೀಯ ಪಿಯುಸಿ
ಎನ್ನುವುದು ಮುಂದಿನ ವಿದ್ಯಾರ್ಜನೆಗಿರುವ ಪ್ರಮುಖ ಘಟ್ಟ. ಅದರ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿ ಉನ್ನತ ವ್ಯಾಸಂಗದತ್ತ ಗಮನಹರಿಸಬಹುದು. ಯಾವಾಗ ವಿದ್ಯಾರ್ಥಿಯು ತನಗೆ ಲಭ್ಯವಾದ ವಿಚಾರಧಾರೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಾನೋ, ಆಗ ಆತನಿಗೆ ತನ್ನ ಗುರಿಯನ್ನು ತಲುಪಲು ಸಾಧ್ಯ ಎಂದು
ವಿದ್ಯಾರ್ಥಿಗಳಿಗೆ ಕಿವಿಮಾತನ್ನು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ ವಹಿಸಿಕೊಂಡು “ಗ್ರಾಮೀಣ ಭಾಗದ ವಿದ್ಯಾಕಾಂಕ್ಷಿಗಳ ಆಶಯವನ್ನು ಈಡೇರಿಸುವ ಸಲುವಾಗಿ ನಮ್ಮ ಹಿರಿಯರು ದೀಪ ಪ್ರಜ್ವಲಿಸಿ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ಹಾಗೆ ಬೆಳಗಿಸಿದ ದೀಪವು ನಾಡಿನ ಉದ್ದಗಲಕ್ಕೂ ಬೆಳಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿದ್ಯಾರ್ಥಿಗಳ ಬೆಳವಣಿಗೆಗೆ ಅಡಿಗಲ್ಲು ಹಾಕಿದ ಜ್ಞಾನ ದೇಗುಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದೆ. ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆಯಲ್ಲಿದ್ದು ಜ್ಞಾನಾರ್ಜನೆ ಮಾಡಿ ಯಶಸ್ಸಿನ ಕಡೆಗೆ ಸಾಗುವುದೇ ಪ್ರಾಧ್ಯಾಪಕ ವೃಂದಕ್ಕೆ
ವಿದ್ಯಾರ್ಥಿಗಳು ನೀಡಬಲ್ಲ ಅತ್ಯುತ್ತಮ ಗುರು ಕಾಣಿಕೆ” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಶ್ವೀಜ್ ಕಶ್ಯಪ್ ಇವರಿಗೆ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಲಾಯಿತು. ಜೆ ಇ ಇ ಪ್ರಥಮ ಹಂತದ ಪರೀಕ್ಷೆಯಲ್ಲಿ 99.28
ಪರ್ಸೆಂಟೈಲ್ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಹನ್ ಕೆ.ಎಲ್ ನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಳಿಕ ಕಾಲೇಜಿನ ವಾರ್ಷಿಕ ಸಂಚಿಕೆ 2024-25ನೇ ಸಾಲಿನ ʼಚಿಗುರುʼ ಇದರ ಮುಖಪುಟ ಅನಾವರಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ವತ್ಸಲಾ ರಾಜ್ಞಿ, ಉಪಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಎಂ. ದೇವಿಚರಣ್ ರೈ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಯಾಮಣಿ ಟಿ.ಕೆ
ವಂದಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ತುಷಾರಾ ಆರ್.ಬಿ ಕಾರ್ಯಕ್ರಮವನ್ನು ನಿರೂಪಿಸಿದರು.