Saturday, March 29, 2025
ಸುದ್ದಿ

ಬಿಸಿಲ ಬೇಗೆಗೆ ಹೆಚ್ಚಿದ ಎಳನೀರು ದರ – ಕಹಳೆ ನ್ಯೂಸ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎಳನೀರಿನ ದರ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಹೊರೆಯಾಗಿದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಬರಬೇಕಿದ್ದ ಬಿಸಿಲು ಈ ವರ್ಷ ಫೆಬ್ರುವರಿಯಲ್ಲೇ ಬಂದಿದೆ. ಕಳೆದ ವರ್ಷ ಇದೇ ಕಾಲಕ್ಕಾಗಲೇ ಒಂದಿಷ್ಟು ಮಳೆ ಬಿದ್ದಿತ್ತು. ವಾತಾವರಣ ತಂಪೂ ಆಗಿತ್ತು. ಚಳಿ ಇನ್ನೂ ಹೋಗಿರಲಿಲ್ಲ.

ಕೃಷಿ ಇಲಾಖೆಯ ದತ್ತಾಂಶದ ಪ್ರಕಾರ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಶೇ 488ರಷ್ಟು ಪ್ರಮಾಣದಲ್ಲಿ ಹೆಚ್ಚಿನ ಮಳೆಯಾಗಿತ್ತು. ಅಂದರೆ ಕೇವಲ 3.2 ಮೀಟರ್‌ನಷ್ಟು ಮಾತ್ರ ಮಳೆಯಾಗಬೇಕಿದ್ದ ತಿಂಗಳಿನಲ್ಲಿ 18.8 ಮಿ.ಮೀ ಅಂದರೆ ಒಂದೂವರೆ ಸೆಂಟಿಮೀಟರ್‌ಗೂ ಅಧಿಕ ಮಳೆ ಸುರಿದಿತ್ತು. ಹಾಗಾಗಿ, ವಾತಾವರಣದಲ್ಲಿ ಈ ವರ್ಷದಷ್ಟು ಉಷ್ಣಾಂಶ ಇರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವರ್ಷ ಇನ್ನೂ ಒಂದು ಹನಿ ಮಳೆಯಾಗಿಲ್ಲ. ಕನಿಷ್ಠ ಪಕ್ಷ ಆಕಾಶದಲ್ಲಿ ಅಂಗೈ ಅಗಲದಷ್ಟು ಮೋಡಗಳ ಸುಳಿದಾಟವೂ ಇಲ್ಲ. ಶುಭ್ರ ನೀಲಿ ಆಗಸದಲ್ಲಿ ಸೂರ್ಯ ನಿಗಿನಿಗಿ ಕೆಂಡದಂತೆ ಉರಿಯುತ್ತಿದ್ದಾನೆ. ಬಿಸಿಲ ಬೇಗೆಯು ಬೇಸಿಗೆ ಬರುವುದಕ್ಕೆ ಮುನ್ನವೇ ಎಲ್ಲೆಡೆ ವ್ಯಾಪಿಸತೊಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಈ ವರ್ಷ ಬಿಸಿಲ ಬೇಗೆಯನ್ನು ತಣಿಸಿಕೊಳ್ಳಲು ಸಹಜವಾಗಿಯೇ ಜನರ ಒಲವು ಎಳನೀರಿನತ್ತ ನೆಟ್ಟಿದೆ. ಆದರೆ, ಎಳನೀರು ಕುಡಿಯಲು ಹೋದರೆ ಅದರ ದರ ಕಂಡು ಹಿಂದೇಟು ಹಾಕುವ ಸ್ಥಿತಿ ಬಡವರದ್ದಾಗಿದೆ.

ಈಗಾಗಲೇ ದರ ಅರ್ಧಶತಕ ತಲುಪಿದೆ. ಸಾಮಾನ್ಯವಾಗಿ ನಗರದ ಎಲ್ಲೆಡೆ ₹ 50 ಇದೆ. ಕೆಲವು ಕಡೆಗಳಲ್ಲಿ ಮಾತ್ರ ₹ 45 ಇದೆ. ಪರಿಸ್ಥಿತಿ ಗಮನಿಸಿದರೆ ದರ ಇನ್ನೂ ಹೆಚ್ಚಾಗುವ ಸಂಭವ ಇದೆ ಎಂದು ಎಳನೀರಿನ ವ್ಯಾಪಾರಸ್ಥರು ಹೇಳುತ್ತಾರೆ.

ಏಕೆಂದರೆ, ಈ ಬಾರಿ ಕಳೆದೆರಡು ತಿಂಗಳುಗಳಿಂದ ಕೊಡಗಿನಲ್ಲಿ ಮಾತ್ರವಲ್ಲ, ರಾಜ್ಯದ ಎಲ್ಲೂ ಮಳೆಯಾಗಿಲ್ಲ. ಹೊರರಾಜ್ಯದಲ್ಲೂ ಮಳೆ ಸುರಿದಿಲ್ಲ. ಎಲ್ಲೆಡೆ ಈ ವರ್ಷ ಬಿಸಿಲ ಝಳ ಹೆಚ್ಚಿದೆ. ಇದರಿಂದ ಸಹಜವಾಗಿಯೇ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ದರವೂ ಹೆಚ್ಚು ಸಿಗುವುದರಿಂದ ಇಲ್ಲಿನ ತೆಂಗು ಬೆಳೆಗಾರರು ಹೊರರಾಜ್ಯದಿಂದ ಬಂದ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ.

ಹೊರರಾಜ್ಯದ ವ್ಯಾಪಾರಸ್ಥರಿಂದ ಹೆಚ್ಚಿದ ಖರೀದಿ

ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ತೆಂಗು ಬೆಳೆಯುವುದು ಕಡಿಮೆ. ಇಲ್ಲಿಗೆ ಹುಣಸೂರು ನಂಜನಗೂಡು ಹೊಳೆನರಸೀಪುರ ಭಾಗಗಳಿಂದ ಎಳನೀರಿನ ಆವಕವಾಗುತ್ತಿದೆ. ಈಗ ಹೊರರಾಜ್ಯದಿಂದ ಬಂದ ವ್ಯಾಪಾರಸ್ಥರು ಅಲ್ಲಿಯೇ ಲೋಡ್‌ಗಟ್ಟಲೆ ಎಳನೀರನ್ನು ಖರೀದಿಸಿ ತಮ್ಮ ತಮ್ಮ ರಾಜ್ಯಗಳಿಗೆ ಒಯ್ಯುತ್ತಿದ್ದಾರೆ. ಇದರಿಂದ ಇಲ್ಲಿಗೆ ಬರುವ ಉತ್ತಮ ಗುಣಮಟ್ಟದ ಎಳನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಇಲ್ಲಿನ ಮಾರುಕಟ್ಟೆಯ ಸಮೀಪದ ಎಳನೀರು ವ್ಯಾಪಾರಿ ಹನೀಫ್ ‘ನಾನು ಎಳನೀರಿಗೆ ₹ 1 ಇದ್ದಾಗಿನಿಂದಲೂ ವ್ಯಾಪಾರ ಮಾಡುತ್ತಿರುವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದರ ಒಂದೇ ಸಮನೆ ಏರಿಕೆ ಕಾಣುತ್ತಿದೆ. ಹೊರರಾಜ್ಯದಿಂದಲೂ ಉತ್ತಮ ಬೇಡಿಕೆ ಇರುವುದರಿಂದ ಸಹಜವಾಗಿಯೇ ಬೆಳೆಗಾರರು ಹೊರರಾಜ್ಯಗಳಿಗೆ ಎಳನೀರು ಕಳುಹಿಸುತ್ತಿದ್ದು ನಮಗೆ ಸಿಗುವ ಎಳನೀರಿನ ಪ್ರಮಾಣ ಕಡಿಮೆಯಾಗಿದೆ’ ಎಂದು ಹೇಳಿದರು.

ಹೆಚ್ಚಿದ ಎಳನೀರಿನ ಮೌಲ್ಯವರ್ಧಿತ ಉತ್ಪನ್ನ

ಇತ್ತೀಚಿನ ವರ್ಷಗಳಲ್ಲಿ ಎಳನೀರಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯೂ ಹೆಚ್ಚುತ್ತಿದೆ. ಎಳನೀರಿನಿಂದ ಐಸ್‌ಕ್ರೀಂ ತಂಪುಪಾನೀಯ ಎಳನೀರು ಜೆಲ್ಲಿ ಸೇರಿದಂತೆ ಹಲವು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚುತ್ತಿರುವುದರಿಂದ ಎಳನೀರಿಗೆ ಬೇಡಿಕೆ ಏರಿಕೆಯಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯು ಇಲ್ಲದಿರುವುದು ತೆಂಗನ್ನು ಬಾಧಿಸುತ್ತಿರುವ ವಿವಿಧ ರೋಗಗಳು ಬೆಳೆಗಾರರ ಸಮಸ್ಯೆಗಳಿಂದಲೂ ಇಳುವರಿ ಕಡಿಮೆಯಾಗುತ್ತಿದ್ದು ಬೆಲೆ ಏರಿಕೆಗೆ ಕಾರಣ ಎನಿಸಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ