
ಕಲ್ಲಡ್ಕ: ಫೆ, 18; ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದಲೇ ಆಯೋಜಿಸಲಾದ ಆಸ್ವಾದನಮ್2025 ಆಹಾರಮೇಳ ನಡೆಯಿತು. ಸ್ವತಃ ವಿದ್ಯಾರ್ಥಿಗಳೇ ಚಾಟ್ಸ್, ಗೋಬಿ ಮಂಚೂರಿ, ಬಿರಿಯಾನಿ, ಫ್ರುಟ್ ಸಲಾಡ್, ಬಗೆ ಬಗೆಯ ಪಾನೀಯಗಳು ಹೀಗೆ ವಿವಿಧ ತಿಂಡಿ ತಿನಿಸುಗಳನ್ನು ವ್ಯಾಪಾರ ಮಾಡಿ ವ್ಯಾಪಾರದ ಅನುಭವಗಳನ್ನು ಪಡೆದುಕೊಂಡರು. ಅಂದಾಜು 200 ವಿದ್ಯಾರ್ಥಿಗಳು ಒಟ್ಟು 21 ಸ್ಟಾಲ್‌ಗಳಲ್ಲಿ ವ್ಯವಹಾರಗಳನ್ನು ನಡೆಸಿದರು.
ಕಲಿಕೆಯು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರದೆ ಪ್ರಾಯೋಗಿಕ ಅನುಭವಗಳನ್ನು ಪಡೆದುಕೊಳ್ಳಲು ಈ ಕಾರ್ಯಕ್ರಮವು ಸಹಕಾರಿಯಾಯಿತು.
ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವು ಚಾಲನೆಗೊಂಡಿದ್ದು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ ಆದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ಆದ್ಯಕ್ಷತೆ ವಹಿಸಿ, ಮೊಸರು ಕಡೆಯುವ ಮೂಲಕ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಾವಲಂಬಿಯಾಗಿ ಜೀವನವನ್ನು ಧೈರ್ಯದಿಂದ ಎದುರಿಸಲು ಇಂತಹ ಯೋಜನೆಗಳು ಮಹತ್ವಪೂರ್ಣವಾಗಿವೆ ಎಂಬುದಾಗಿ ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಲ್ಲಡ್ಕದ ಕುದ್ರೆಬೆಟ್ಟಿನ ಹೋಟೆಲ್ ಸಮುದ್ರ ಇದರ ಮಾಲಕರಾದ ಶ್ರೀ ಕರುಣಾಕರ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜು ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ ಪ್ರಾಂಶುಪಾಲರಾದ ಶ್ರೀ ಯತಿರಾಜ್ ಪೆರಾಜೆ ಹಾಗೂ ಶ್ರೀಮತಿ ಸುಕನ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಕಾಂ ವಿದ್ಯಾರ್ಥಿಗಳಾದ ಕು. ಧನುಶ್ರೀ ಸ್ವಾಗತಿಸಿ, ವಿಸ್ಮಿತಾ ವಂದಿಸಿ, ಕು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು.