ಸಿಸಿಬಿ ಪೊಲೀಸರ ಭರ್ಜರಿ ಭೇಟೆ: 119 ಕೆ.ಜಿ. ಗಾಂಜಾ ಸಾಗಾಟ; ನಾಲ್ವರ ಸೆರೆ-ಕಹಳೆ ನ್ಯೂಸ್

ಮಂಗಳೂರು: ಆಂಧ್ರಪ್ರದೇಶದಿಂದ ಮಂಗಳೂರು ಮಾರ್ಗವಾಗಿ ಮೀನು ವಾಹನ ಹಾಗೂ ಕಾರಿನಲ್ಲಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದ್ದ ಬರೋಬ್ಬರಿ 35 ಲಕ್ಷ ರೂ. ಮೌಲ್ಯದ 119 ಕೆ.ಜಿ. ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಉಪ್ಪಳ ಮಂಗಲ್ಪಾಡಿ, ಪ್ರಸ್ತುತ ಬಂದ್ಯೋಡ್ ಕುಬನೂರು ನಿವಾಸಿ ಮೊಯ್ದಿàನ್ ಶಬ್ಬೀರ್(38), ಆಂಧ್ರಪ್ರದೇಶದ ಮಹೇಶ್ ದ್ವಾರಿಕಾನಾಥ ಪಾಂಡೆ(30), ಕೇರಳದ ಅಜಯ್‌ಕೃಷ್ಣ (33), ಹರಿಯಾಣದ ಜೀವನ್ ಸಿಂಗ್ (35) ಬಂಧಿತರು. ಇವರಿಂದ 119 ಕೆ.ಜಿ. ಗಾಂಜಾ, ಸಾಗಾಟಕ್ಕೆ ಬಳಸಲಾದ 407 ಟೆಂಪೊ, ಆಲ್ಟೊ ಕಾರು, 5 ಮೊಬೈಲ್‌ಗಳು ಸೇರಿದಂತೆ ಒಟ್ಟು 51 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಫೆ. 17ರಂದು ಆಂಧ್ರಪ್ರದೇಶದಿಂದ ಕೇರಳಕ್ಕೆ ಎರಡು ವಾಹನಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ತಾಲೂಕು ಮಿತ್ತಕೋಡಿಯಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದರು. ಕಾರ್ಯಾಚರಣೆ ಯಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ರಫೀಕ್ ಕೆ. ಎಂ., ಪಿಎಸ್‌ಐ ಶರಣಪ್ಪ ಭಂಡಾರಿ, ಎಎಸ್‌ಐ ಮೋಹನ್ ಕೆ.ವಿ., ರಾಮ ಪೂಜಾರಿ, ಸುಜನ್ ಶೆಟ್ಟಿ ಪಾಲ್ಗೊಂಡಿದ್ದರು.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿಗಳು
ಆರೋಪಿ ಮೊಯಿದ್ದೀನ್ ಶಬ್ಬೀರ್ ವಿರುದ್ಧ ಕಾಸರಗೋಡಿನ ವಿವಿಧ ಠಾಣೆಗಳಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿವೆ. ಆಂಧ್ರದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂ ಸಿದಂತೆ ಪ್ರಕರಣ ದಾಖಲಾಗಿದೆ. ಈತನನ್ನು 2023ರಲ್ಲಿ ಸಿಸಿಬಿ ದಸ್ತಗಿರಿ ಮಾಡಿ 23.250 ಕೆಜಿ ಗಾಂಜಾ ವಶಪಡಿಸಿಕೊಂಡಿತ್ತು. ಈತನು 6 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.
ಆರೋಪಿ ಮಹೇಶ್ ದ್ವಾರಿಕಾನಾಥ ಪಾಂಡೆ ವಿರುದ್ಧ ಆಂಧ್ರದ ರಾಜಮಂಡ್ರಿಯಲ್ಲಿ 2 ಪ್ರಕರಣವಿದೆ. ಅಜಯ್ ಕೃಷ್ಣನ್ ವಿರುದ್ಧ ಆಲಪ್ಪುಳಂ ಜಿಲ್ಲೆಯ ನಾನಾ ಠಾಣೆಗಳಲ್ಲಿ ದರೋಡೆ, ಹಲ್ಲೆ, ಗಾಂಜಾ, ನಕಲಿ ಚಿನ್ನ ಅಡವಿರಿಸಿ ವಂಚನೆ ಮಾಡಿರುವ ಹೀಗೆ ಒಟ್ಟು 6 ಪ್ರಕರಣಗಳು ದಾಖಲಾಗಿದೆ. ಆರೋಪಿ ಜೀವನ್ ಸಿಂಗ್ ವಿರುದ್ಧ ಆಂಧ್ರದ ಮೊತುಕುಡುಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ.