Wednesday, April 2, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಚಾರ್ಮಾಡಿ ಘಾಟಿ ಕಾಮಗಾರಿ: ಗುತ್ತಿಗೆದಾರರ ಬದಲಿಸಲು ಆಗ್ರಹ-ಕಹಳೆ ನ್ಯೂಸ್

ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯ ಇನ್ನೂ ಆರಂಭವಾಗಿಲ್ಲ. ಇದರ ಗುತ್ತಿಗೆದಾರರು ಕೆಲಸವನ್ನು ಗಡುವಿನೊಳಗೆ ಪೂರ್ಣಗೊಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗಾಗಿ ಗುತ್ತಿಗೆದಾರರನ್ನು ಬದಲಾಯಿಸಬೇಕು ಎಂದು ಜಿಲ್ಲೆಯ ಶಾಸಕರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಒತ್ತಾಯಿಸಿದರು.

ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಸಚಿವರ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಶಾಸಕ ಹರೀಶ ಪೂಂಜ, ‘ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ ಈ ಹಿಂದೆಯೂ ಎರಡು ಕಾಮಗಾರಿಗಳನ್ನು ಸರಿಯಾಗಿ ನಡೆಸಿಲ್ಲ. ಘಾಟಿಯಲ್ಲಿ ಕೆಲಸ ಶುರು ಮಾಡಿ, ಮಳೆಗಾಲದಲ್ಲಿ ಅರ್ಧಕ್ಕೆ ಕೆಲಸ ನಿಂತರೆ ತೊಂದರೆಯಾಗುತ್ತದೆ.’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ 21ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಉನ್ನತ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಘಾಟಿಯ ಆರಂಭಿಕ ಸ್ಥಳದಿಂದ 12ನೇ ತಿರುವಿನವರೆಗೆ ರಸ್ತೆಯನ್ನು 10 ಮೀಟರ್‌ಗೆ ವಿಸ್ತರಿಸಲಾಗುತ್ತದೆ. ₹ 343 ಕೋಟಿ ವೆಚ್ಚದ ಈ ಯೋಜನೆಯ ಈ ಕಾಮಗಾರಿಯನ್ನು ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆ ₹ 180 ಕೋಟಿಗೆ ಗುತ್ತಿಗೆಗೆ ಪಡೆದಿದೆ. 2025ರ ಜನವರಿಯಳಗೆ ಕೆಲಸ ಆರಂಭವಾಗಬೇಕಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ನಗರದ ಸರ್ಕೀಟ್ ಹೌಸ್‌ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಇಲ್ಲಿನ ಕೊಠಡಿಗಳನ್ನು ಮೇಲ್ದರ್ಜೆಗೇರಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಂ.ಪಿ ಸಲಹೆ ನೀಡಿದರು. ಸರ್ಕೀಟ್ ಹೌಸ್ ಬಳಿ ಸಾಕಷ್ಟು ಜಾಗ ಲಭ್ಯವಿದ್ದು, ಅಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿ ಅತ್ಯಾಧುನಿಕ ಸವಲತ್ತು ಕಲ್ಪಿಸಬಹುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಈ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಮೇರಿಹಿಲ್‌ ಹೆಲಿಪ್ಯಾಡ್‌ನ ಸಂಪರ್ಕ ರಸ್ತೆ ಮತ್ತು ಬೇಲಿ ನಿರ್ಮಾಣಕ್ಕೆ ₹1 ಕೋಟಿ ಹಾಗೂ ಪುತ್ತೂರು ಮೊಟ್ಟೆತ್ತಡ್ಕದಲ್ಲಿ ಹೆಲಿಪ್ಯಾಡ್‌ ಮೇಲ್ದರ್ಜೆಗೇರಿಸಲು ₹ 50 ಲಕ್ಷ ಪ್ರಸ್ತಾವ ಸಿದ್ದಪಡಿಸಲಾಗಿದೆ. ಸುಳ್ಯದಲ್ಲಿ ಹೆಲಿಪ್ಯಾಡ್‌ಗೆ ಜಾಗ ಗುರುತಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕುಕ್ಕೆ ಸುಬ್ರಹ್ಮಣ್ಯಕ್ಕೆ ಹಾಗೂ ಸುಳ್ಯಕ್ಕ ಬೈಪಾಸ್ ರಸ್ತೆಗಳನ್ನು ನಿರ್ಮಿಸುವುದಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿದ್ದೇವೆ. ಪುತ್ತೂರಿನಲ್ಲಿ ರೈಲ್ವೆ ಕೆಳಸೇತುವೆಯನ್ನು ಇಲಾಖೆಯಿಂದಲೇ ನಿರ್ಮಿಸಲಿದ್ದೇವೆ. ಕಳೆದ ಸಾಲಿನಲ್ಲಿ 10, ಈ ಸಾಲಿನಲ್ಲಿ 20 ಕಾಲು ಸಂಕ ಜಿಲ್ಲೆಗೆ ಮಂಜೂರಾಗಿತ್ತು. 2025-26ನೇ ಸಾಲಿನಲ್ಲಿ ಮತ್ತೆ 30 ಕಾಲುಸಂಕ ಮಂಜೂರು ಮಾಡುತ್ತೇವೆ’ ಎಂದು ಸಚಿವರು ತಿಳಿಸಿದರು.

ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ 1500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿನ ಕಟ್ಟಡಕ್ಕ ₹ 3.50 ಕೋಟಿ ಮಂಜೂರಾದರೂ ಕೆಲಸ ಶುರು ಮಾಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಬೆಳ್ತಂಗಡಿಯ ಪ್ರವಾಸಿ ಬಂಗಲೆ ವಿಚಾರದಲ್ಲೂ ಇದೇ ರೀತಿ ಆಗಿದೆ ಎಂದು ಶಾಸಕ ಹರೀಶ್‌ ಪೂಂಜ ದೂರಿದರು.

‘ಬೆಳ್ತಂಗಡಿ ಪಿ.ಯು. ಕಾಲೇಜಿನ ಕಟ್ಟಡದ ಮೊದಲ ಹಂತ ಪೂರ್ಣಗೊಂಡಿದೆ. ಅದರ ಉದ್ಘಾಟನೆ ಸಂದರ್ಭದಲ್ಲಿ ಎರಡನೇ ಹಂತಕ್ಕೆ ಮತ್ತಷ್ಟು ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆಯುವ ಮುನ್ನವೇ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪವಿದ್ದು, ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೂ ದೂರು ನೀಡಲಾಗಿದೆ. ಜಾಗೃತ ದಳದವರೂ ತನಿಖೆ ನಡೆಸಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಅಶೋಕ್ ಕುಮಾರ್ ರೈ, ಭಾಗಿರಥಿ ಮುರುಳ್ಯ ಮೊದಲಾದವರು ಭಾಗವಹಿಸಿದ್ದರು.

ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವಸೇತುವೆಗಳ ಬಳಿ ಮರಳುಗಾರಿಕೆ ತಡೆಯಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇಲಾಖೆ ವತಿಯಿಂದಲೂ ಕ್ರಮ ವಹಿಸುತ್ತೇವೆ
‘ನೆಲ್ಲಿಕಟ್ಟೆಯಲ್ಲಿ ವಾಣಿಜ್ಯ ಸಂಕೀರ್ಣ’

ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ನಾಲ್ಕು ಮಹಡಿಯ ವಾಣಿಜ್ಯ ಸಂಕೀರ್ಣ ನಿರ್ಮಿಸಿ ವರಮಾನ ಗಳಿಸುವ ಯೋಜನೆ ರೂಪಿಸಲಾಗಿದೆ’ ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ‘ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ₹17.60 ಕೋಟಿ ವೆಚ್ಚದಲ್ಲಿ 1983 ಚ. ಮೀ ವಿಸ್ತೀರ್ಣದ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸ ರೂಪಿಸಲಾಗುತ್ತಿದೆ. ಇದರಿಂದ ವಾರ್ಷಿಕ ₹ 1.40 ಕೋಟಿ ವರಮಾನ ಬರಲಿದೆ. ವರಮಾನ ಗಳಿಸಲು ರೂಪಿಸಿರುವ ಮೊದಲ ಯೋಜನೆ ಇದು. ಇದೇ ಮಾದರಿಯಲ್ಲಿ ಇತರ ಕಡೆಯೂ ಇಂತಹ ಯೋಜನೆಗಳನ್ನು ರೂಪಿಸಲಿದ್ದೇವೆ’ ಎಂದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ