Friday, March 28, 2025
ದೆಹಲಿರಾಜ್ಯಸುದ್ದಿ

ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರ ಸ್ವೀಕಾರ; ರಾಮ್​ಲೀಲಾ ಮೈದಾನದಲ್ಲಿ ಅದ್ಧೂರಿ ಪ್ರಮಾಣವಚನ ಕಾರ್ಯಕ್ರಮ-ಕಹಳೆ ನ್ಯೂಸ್

ನವದೆಹಲಿ: ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಇಂದು ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರ ಸ್ವೀಕಾರ ಮಾಡಲಿದ್ದು, ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ಕಳೆದ 2 ದಿನಗಳಿಂದ ದೆಹಲಿ ಬಿಜೆಪಿ ಘಟಕ ಕಾರ್ಯ ಕ್ರಮದ ಸಿದ್ದತೆ ಮಾಡಿಕೊಂಡಿದ್ದು, ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹಾಗೂ ಹೊಸ ಮುಖ್ಯಮಂತ್ರಿ ರೇಖಾ ಗುಪ್ತಾ ಇರಲಿದ್ದಾರೆ. ಎರಡನೆಯ ವೇದಿಕೆಯಲ್ಲಿ, ಪ್ರಮುಖ ಆಹ್ವಾನಿತರು, ಧಾರ್ವಿುಕ ಮುಖಂಡರಿಗೆ ಮೀಸಲಿದ್ದರೆ, ಮೂರನೆಯ ವೇದಿಕೆಯಲ್ಲಿ ಸಂಸದರು ಮತ್ತು ಶಾಸಕರು ಆಸೀನರಾಗಲಿದ್ದಾರೆ. ವೇದಿಕೆ ಮುಂಭಾಗದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗಾಗಿ 30,000 ಆಸನದ ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮಾಣ ವಚನ ಕಾರ್ಯಕ್ರಮಕ್ಕೆ, ರಾಜಕಾರಣಿಗಳು, ವಿಐಪಿಗಳಿಗೆ ಮಾತ್ರವಲ್ಲದೆ, ದೆಹಲಿಯ ಕ್ಯಾಬ್ ಮತ್ತು ಆಟೋ ರಿಕ್ಷಾ ಚಾಲಕರು, ರೈತರು, ಕಾರ್ವಿುಕರು, ಕೊಳೆಗೇರಿ ನಿವಾಸಿಗಳು ಹಾಗೂ ಚುನಾವಣೆಯಲ್ಲಿ ಬಿಜೆಪಿಗೆ ಬಲ ನೀಡಿದ ಸಾಮಾನ್ಯ ಮಹಿಳೆಯರಿಗೂ ಸಹ ವಿಶೇಷ ಆಹ್ವಾನ ನೀಡಲಾಗಿದೆ. ಇನ್ನುಳಿದಂತೆ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ನಿರ್ಗಮಿತ ಸಿಎಂ ಅತಿಶಿ, ಕಾಂಗ್ರೆಸ್ ದೆಹಲಿ ಘಟಕದ ಮುಖ್ಯಸ್ಥ ದೇವೇಂದರ್ ಯಾದವ್ ಸೇರಿ 50ಕ್ಕೂ ಹೆಚ್ಚು ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ. ವಿವಿಧ ರಾಜ್ಯಗಳ ಬಿಜೆಪಿ ಹಾಗೂ ಎನ್​ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು, ಸಂಸದರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ನವದೆಹಲಿಯಾದ್ಯಂತ 25000 ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ರಾಮಲೀಲಾ ಮೈದಾನದ ಸುತ್ತಮುತ್ತ ಅರೆಸೇನಾ ಪಡೆ ಯೊಂದಿಗೆ 5,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕಮಾಂಡೋಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ಕೇಂದ್ರ ಸಶಸ್ತ್ರ ಮೀಸಲು ಪಡೆಗಳನ್ನ ನಿಯೋಜನೆ ಮಾಡಲಾಗಿದೆ. ಸ್ನೈಪರ್​ಗಳನ್ನ ಹತ್ತಿರದ ಬಹುಮಹಡಿ ಕಟ್ಟಡಗಳಲ್ಲಿ ನಿಯೋಜಿಸಲಾಗಿದ್ದು, ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾ ಸಹ ಹಲವು ಕಡೆ ಅಳವಡಿಕೆ ಮಾಡಲಾಗಿದೆ.

ದೆಹಲಿಯಲ್ಲಿ 15 ವರ್ಷಗಳ ಕಾಲ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಶಿಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರೂ, ದೆಹಲಿಗೆ ಮೊದಲ ಮಹಿಳಾ ಮುಖ್ಯಮಂತ್ರಿ ಆಯ್ಕೆ ಮಾಡಿರುವ ಗರಿಮೆ ಬಿಜೆಪಿಗೆ ಸಲ್ಲುತ್ತದೆ. 1998ರಲ್ಲಿ ಸುಷ್ಮಾ ಸ್ವರಾಜ್​ರನ್ನ ದೆಹಲಿ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿತ್ತು. ಆ ಬಳಿಕ ಈಗ ಬಿಜೆಪಿಗೆ ಅಧಿಕಾರ ದೊರೆತಿದ್ದು, ಮೊದಲ ಬಾರಿ ಶಾಸಕಿಯಾಗಿರುವ ರೇಖಾ ಗುಪ್ತಾಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ