
ಉಡುಪಿ: ‘ಉತ್ತಮ ಆಡಳಿತ ನೀಡಿದ ಹಿಂದೂ ಮಹಾಕ್ರಾಂತಿಕಾರಿ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುವುದು’ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಮಲ್ಪೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ವಿ. ನಾಯಕ್ ಮಾತನಾಡಿ, ‘ಅಂದಿನ ಕಾಲಘಟ್ಟದಲ್ಲಿ ದೇಶ ಕಟ್ಟಲು ಶ್ರದ್ಧೆಯಿಂದ ಹೋರಾಡಿದ್ದ ಧೀಮಂತ ನಾಯಕ ಶಿವಾಜಿ’ ಎಂದು ಹೇಳಿದರು.
ಉಪನ್ಯಾಸ ನೀಡಿದ ಲೇಖಕ ಮಂಜುನಾಥ ಹಿಲಿಯಾಣ, ‘ಶಿವಾಜಿಯ ಶ್ರದ್ಧೆ ಮತ್ತು ಧೈರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು. ಅವರ ಆದರ್ಶ, ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು’ ಎಂದರು.
ಯಕ್ಷಗಾನ ಕ್ಷೇತ್ರದ ಸಾಧಕ ಕೇಶವ ರಾವ್ ಬಡಾನಿಡಿಯೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮೃದ್ಧಿ ಆರ್. ಅವರನ್ನು ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ, ಮರಾಠ ಪರಿಷತ್ತಿನ ಪದಾಧಿಕಾರಿಗಳು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್ ಬಂಗೇರ ನಿರೂಪಿಸಿದರು. ಶಿಕ್ಷಕ ಸತೀಶ್ ಭಟ್ ವಂದಿಸಿದರು.