ಕ್ರೀಡೆ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿ – ಬಿ. ನರಸಿಂಹ ಪ್ರಸಾದ್-ಕಹಳೆ ನ್ಯೂಸ್

ಪುತ್ತೂರು, ಫೆಬ್ರವರಿ 20: ಒತ್ತಡ, ಖಿನ್ನತೆ ಮುಂತಾದ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಕಾಣಸಿಗುತ್ತದೆ. ಮೊಬೈಲ್ ಇತ್ಯಾದಿ ಆಧುನಿಕ ಉಪಕರಣಗಳ ಅತಿಯಾದ ಗೀಳು ಇದಕ್ಕೆ ಕಾರಣ. ಅಂದಿನ ಕಾಲದಲ್ಲಿ ಎಲ್ಲರೂ ಬಿಸಿಲು, ಮಳೆಯನ್ನು ಲೆಕ್ಕಿಸದೇ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಹಾಗಾಗಿ ಇಂದಿನ ವಿದ್ಯಾರ್ಥಿಗಳೂ ಕೂಡಾ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದುನ್ಯಾಯವಾದಿ, ವಿಶ್ವವಿದ್ಯಾನಿಲಯ ಮಟ್ಟದ ಕ್ರಿಕೆಟ್ ಆಟಗಾರ ಬಿ. ನರಸಿಂಹ ಪ್ರಸಾದ್ ತಿಳಿಸಿದರು.
ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಶ್ವವಿದ್ಯಾಲಯ ಮಟ್ಟದ ಖೋಖೋ ಆಟಗಾರ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಆನಂದ ಶೆಟ್ಟಿ ಕಲ್ಲಡ್ಕ ಕ್ರೀಡೆಗಾಗಿ ಹೆಚ್ಚಿನ ಸಮಯವನ್ನು ನೀಡಬೇಕು.ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗುತ್ತದೆ. ಸಾಧನೆಯೆಡೆಗೆ ಸಾಗಲು ಹಿಂದೆ ಗುರು ಹಾಗೂ ಮುಂದೆ ಗುರಿ ಸದಾಇರಬೇಕಾಗುತ್ತದೆ ಎಂದು ನುಡಿದರು.
ಕಾಲೇಜಿನ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡಿದರು.ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ ಭಟ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಖೋ ಖೋ ಆಟಗಾರ ಗುರುಪ್ರಸಾದ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮುಖ್ಯ ಅತಿಥಿ ಆನಂದ ಶೆಟ್ಟಿ ಕಲ್ಲಡ್ಕ ಇವರಿಗೆ ಹಸ್ತಾಂತರಿಸಿದರು. ನಂತರ ಕ್ರೀಡಾಪಟು ಪ್ರಣಾಂಶ್ ಪಕ್ಕಳ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಪಥ ಸಂಚಲನದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ಆನಂತರ ವಿವಿಧ ಆಟೋಟ ಸ್ಪರ್ಧೆಗಳು ಜರುಗಿತು.
ಕಾರ್ಯಕ್ರಮವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿ ಹಾಗೂ ಕ್ರೀಡಾ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ ಅಶ್ಮಿತಾ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ.ಆರ್ ನಿಡ್ಪಳ್ಳಿ ನಿರೂಪಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್ ವಿ.ಎಸ್ ನಿರ್ವಹಿಸಿದರು.
ಫಲಿತಾಂಶ:
ತೃತೀಯ ಬಿಕಾಂ(ಎ) ತಂಡ ಪ್ರಥಮ ತಂಡ ಪ್ರಶಸ್ತಿ ಹಾಗೂ ದ್ವಿತೀಯ ಬಿಕಾಂ (ಎ) ದ್ವಿತೀಯ ತಂಡ ಪ್ರಶಸ್ತಿಯನ್ನು ಗಳಿಸಿತು. ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್‌ನ್ನು ವೈಭವ್ (ತೃತೀಯ ಬಿಕಾಂ), ಗುರುಪ್ರಸಾದ್ (ತೃತೀಯ ಬಿಕಾಂ) ಹಾಗೂ ಸಾತ್ವಿಕ್ (ತೃತೀಯ ಬಿಕಾಂ) ಹಾಗೂ ಬಾಲಕಿಯರ ವಿಭಾಗದಲ್ಲಿ ವಿಶಾಲಾಕ್ಷಿ (ದ್ವಿತೀಯ ಬಿಎಸ್ಸಿ) ಪಡೆದುಕೊಂಡರು.