ಸರ್ಕಾರಿ ಕೆಲಸ ಕೊಡಿಸುವುದಾಗಿ ಸಿಎಂ, ಜಿಲ್ಲಾಧಿಕಾರಿ ಸಹಿ ನಕಲು; ಕೋಟ್ಯಂತರ ರೂ. ಪಂಗನಾಮ ಹಾಕಿದ ವ್ಯಕ್ತಿ ಅರೆಸ್ಟ್-ಕಹಳೆ ನ್ಯೂಸ್

ಮಂಡ್ಯ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸುವುದರ ಜತೆಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ವಂಚನೆ ಮಾಡಿದ ಆರೋಪದ ಮೇರೆಗೆ ನಕಲಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ಈತನಿಂದ ನಕಲಿ ನೇಮಕಾತಿ ಪತ್ರ, ಗುರುತಿನ ಚೀಟಿ, ಟ್ಯಾಗ್ ಸೇರಿದಂತೆ ಮಹತ್ವದ ದಾಖಲೆಯನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹಲವರಿಗೆ ವಂಚನೆ ಮಾಡಿದ ಆರೋಪದ ಮೇಲೆ ಮಂಡ್ಯ ನಗರದ ತಾವರೆಗೆರೆ ನಿವಾಸಿ ಎಚ್.ಸಿ.ವೆಂಕಟೇಶ್(36) ಎಂಬಾತನನ್ನು ಬಂಧಿಸಲಾಗಿದೆ. ತಾನೊಬ್ಬ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಹಲವರಿಂದ ಹಣ ಪಡೆದು ವಂಚಿಸಿದ್ದಾನೆ.
ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯ ಎಸ್.ಕೆ. ಗಾಯತ್ರಿ ಎಂಬುವರ ಮಕ್ಕಳಿಗೆ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾನೆ. ಇದಲ್ಲದೆ ನೇತ್ರಾವತಿ ಎಂಬುವರ ಮಗನಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 12.24 ಲಕ್ಷ ರೂ.ಗಳನ್ನು ಪಡೆದಿದ್ದಾನೆ. ಇದೇ ರೀತಿ ಮತ್ತೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ವೆಂಕಟೇಶ್ ತಾನು ವಿಧಾನಸೌಧದಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿದ್ದು, ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ತಮಗೆ ಪರಿಚಯವಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 30 ರಿಂದ 40 ಜನರಿಂದ ಹಣ ಪಡೆದು ವಂಚಿಸಿದ್ದಾನೆ. ಕೆಲವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದು ಕೆಲಸಕ್ಕೆ ಸೇರಿಸುವುದಾಗಿ ಹೇಳಿ ವಾಪಸ್ ಕರೆತಂದಿದ್ದಾನೆ. ಅದೇ ರೀತಿ ಅಬಕಾರಿ ಇಲಾಖೆಗೂ ಕರೆದೊಯ್ದು ಎಲ್ಲೆಡೆ ಸುತ್ತಾಡಿಸಿ ಕೆಲಸಕ್ಕೆ ನಿಯೋಜಿಸುವುದಾಗಿ ಹೇಳಿ ಮತ್ತೆ ವಾಪಸ್ ಕರೆದೊಯ್ದಿದ್ದಾನೆ. ಈತನ ವಂಚನೆ ಬಗೆದಷ್ಟು ಬೆಳಕಿಗೆ ಬರುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿಯನ್ನು ಕೆಲವೊಂದು ದಾಖಲೆಗಳಲ್ಲಿ ಸ್ಕ್ಯಾನ್‌ನಿಂದ ನಕಲು ಮಾಡಿ ಅದನ್ನು ನೇಮಕಾತಿ ಪತ್ರದಲ್ಲಿ ಅಳವಡಿಸಿ ಸುಲಭವಾಗಿ ವಂಚಿಸಿದ್ದಾನೆ. ಮಂಡ್ಯ ಜಿಲ್ಲಾಧಿಕಾರಿ ಪರವಾಗಿ ಎಂಬ ಸಹಿಯನ್ನೂ ಮಾಡಿದ್ದಾನೆ. ಅದು ಯಾರದು ಎಂಬ ಬಗ್ಗೆ ಇನ್ನು ತನಿಖೆ ನಡೆಸುತ್ತಿದ್ದೇವೆ. ಇದೇ ರೀತಿ ಯಾವ್ಯಾವ ಇಲಾಖೆಗಳಲ್ಲಿ ವಂಚನೆ ಮಾಡಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ.
ಆರೋಪಿ ಅಂದಾಜು 2 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿರಬಹುದು. ಈತನ ಮನೆಯಲ್ಲಿ ಶೋಧ ನಡೆಸಿದಾಗ ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಲೋಕಸೇವಾ ಆಯೋಗ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ಸೃಷ್ಠಿಸಿರುವ ನಕಲಿ ದಾಖಲಾತಿಗಳು, ಹಾಜರಾತಿ ಪುಸ್ತಕಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವೆಂಕಟೇಶ ಹಲವರಿಂದ ನಗದು ರೂಪದಲ್ಲೇ ಹಣ ಪಡೆದಿದ್ದು, ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಡಿಜಿಟಲ್ ಪೇಮೆಂಟ್ ಪಡೆದಿದ್ದಾನೆ. ಈಗಾಗಲೇ ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಈತನ ಪತ್ನಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದರೆಂಬ ಮಾಹಿತಿಯೂ ಲಭ್ಯವಾಗಿದ್ದು, ಈ ಬಗ್ಗೆಯೂ ನಾವು ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇಬ್ಬರು ಪೊಲೀಸರ ವಿರುದ್ಧ ತನಿಖೆ
ಆರೋಪಿ ವೆಂಕಟೇಶ್ ಜತೆಗೆ ಶಾಮೀಲಾಗಿದ್ದಾರೆಂಬ ಆರೋಪದ ಮೇರೆಗೆ ಪೊಲೀಸ್ ಇಲಾಖೆಯ ಚಿಕ್ಕಯ್ಯ ಹಾಗೂ ಲೋಕೇಶ್ ಎಂಬುವರ ವಿರುದ್ಧ ಡಿವೈಎಸ್ಪಿ ಮೂಲಕ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದರೆಂಬ ಸುಳಿವು ಸಿಕ್ಕಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರೂ ಆರೋಪಿ ವೆಂಕಟೇಶ್‌ನಿಂದ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಓದಿದ್ದು ಡಿಪ್ಲೊಮೊ, ಹೇಳಿದ್ದು ಕೆಇಎಸ್
ಆರೋಪಿ ವೆಂಕಟೇಶ್ ಡಿಪ್ಲೊಮೊ ವ್ಯಾಸಂಗ ಮಾಡಿದ್ದಾನೆ. ಯಾವುದೇ ಉದ್ಯೋಗವಿರಲಿಲ್ಲ. ಆದರೆ ತಾನು ಕೆಇಎಸ್ ಅಧಿಕಾರಿ ಎಂದು ಹೇಳಿಕೊಂಡಿದಲ್ಲದೆ, ಗುರುತಿನ ಚೀಟಿ ಮಾಡಿಸಿಕೊಂಡಿದ್ದನು. ಇದಲ್ಲದೆ ಎಫ್‌ಡಿಎ ಗುರುತಿನ ಚೀಟಿ ಇತ್ತು. ಕುತ್ತಿಗೆಗೆ ಹಾಕಿಕೊಳ್ಳುವ ಸರ್ಕಾರದ ಲೋಗೋ ಇರುವೆಂಕಟೇಶ್ ಟ್ಯಾಗ್‌ಗಳ ಬಂಡಲ್‌ಗಳನ್ನೇ ಇಟ್ಟುಕೊಂಡಿದ್ದನು.